ಪುತ್ತೂರು: ನಿರ್ಮಾಣ ಹಂತದಲ್ಲಿರುವ ಮನೆಯೊಂದರ ಕಟ್ಟಡದಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡವನ್ನೂರು ಗ್ರಾಮದ ಸುಳ್ಯಪದವು ಸಮೀಪದಲ್ಲಿ ನಡೆದಿದೆ.
ಪಡುವನ್ನೂರು ಗ್ರಾಮದ ಸುಳ್ಯಪದವು ಸಮೀಪದ ಶಬರಿನಗರ ನಿವಾಸಿ ರವಿರಾಜ್(31) ಆತ್ಮಹತ್ಯೆ ಮಾಡಿಕೊಂಡ ಯುವಕ.ಯುವಕನಿಗೆ ಕುಂದಾಪುದ ಹುಡುಗಿಯೊಂದಿಗೆ ಪ್ರೀತಿಯಿತ್ತು ಎನ್ನಲಾಗಿದೆ. ಇದು ರವಿರಾಜ್ ಮನೆಯಲ್ಲಿ ಗೊತ್ತಿರಲಿಲ್ಲ. ರವಿರಾಜ್‌ಗೆ ಮನೆಯವರು ವಿಟ್ಲದ ಯುವತಿಯೊಂದಿಗೆ ವಿವಾಹ ಸಂಬಂಧ ಮಾತುಕತೆ ಬೆಳೆಸಿ ಇದೇ ಬರುವ 25ರಂದು ವಿವಾಹ ನಿಶ್ಚಿತಾರ್ಥ ದಿನಾಂಕ ನಿಗದಿಪಡಿಸಿ ಸಿದ್ಧತೆ ನಡೆಸಿದ್ದರು.
ಶನಿವಾರ ಸಾಯಂಕಾಲ ರವಿರಾಜ್ ತನ್ನ ಮನೆಯಲ್ಲಿ ಸ್ನೇಹಿತನೊಬ್ಬನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೊಗಿದ್ದರು. ರಾತ್ರಿ ಮನೆಯವರು ಕರೆ ಮಾಡಿದಾಗ ಸ್ನೇಹಿತನ ಮನೆಯಲ್ಲಿರುವುದಾಗಿ ತಿಳಿಸಿದ್ದರು.ಆದರೆ ಭಾನುವಾರ ಬೆಳಗ್ಗೆ ರವಿರಾಜ್ ಪ್ರೀತಿ ಮಾಡುತ್ತಿದ್ದ ಕುಂದಾಪುರದ ಯುವತಿಯ ಕಡೆಯವರು ಏಕಾಏಕಿ ವಿವಾಹ ದಿಬ್ಬಣದೊಂದಿಗೆ ಯುವಕನ ಮನೆಗೆ ಮೂರು ವಾಹನಗಳಲ್ಲಿ ಬಂದಿದ್ದರು.
ರವಿರಾಜ್ ಮನೆಯಲ್ಲಿರಲಿಲ್ಲ. ಏಕಾಏಕಿ ವಿವಾಹ ದಿಬ್ಬಣ ಬಂದಿದ್ದ ಕಾರಣ ಈ ವಿಚಾರದಲ್ಲಿ ಮನೆಯವರು ಚಿಂತೆಗೀಡಾಗಿದ್ದರು.ಈ ಬಗ್ಗೆ ವಿಚಾರಿಸಲು ರವಿರಾಜ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್‌ಆಫ್ ಆಗಿತ್ತು.ಈ ಎಲ್ಲ ವಿದ್ಯಮಾನಗಳು ನಡೆದ ಬೆನ್ನಲ್ಲೇ ರವಿರಾಜ್ ಈಶ್ವರಮಂಗಲ ಸಮೀಪದ ಮುಂಡ್ಯದಲ್ಲಿ ನಿರ್ಮಾಣ ಹಂತದ ಸಹೋದರನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿತ್ತು.
ಗುಟ್ಟಾಗಿಟ್ಟಿದ್ದ ಪ್ರೇಮ ಪ್ರಕರಣ :ಕುಂದಾಪುರದ ಯುವತಿಯೊಂದಿಗೆ ರವಿರಾಜ್‌ಗೆ ಪ್ರೇಮವಿದ್ದ ವಿಚಾರ ಮನೆಯವರಿಗೆ ತಿಳಿದಿರಲಿಲ್ಲ. ವಿಟ್ಲದ ಯುವತಿಯೊಂದಿಗೆ ವಿವಾಹ ಮಾತುಕತೆ ಬೆಳಿಸಿ ವಿವಾಹ ನಿಶ್ಚಿತಾರ್ಥಕ್ಕೆ ದಿನ ನಿಗದಿಪಡಿಸಿದಾಗಲೂ ಗುಟ್ಟಾಗಿಟ್ಟಿದ್ದರು.
ಮನೆಯವರು ವಿಟ್ಲದ ಯುವತಿಯೊಂದಿಗೆ ವಿವಾಹ ಸಿದ್ಧತೆ ನಡೆಸುತ್ತಿರುವ ನಡುವೆಯೇ ಕುಂದಾಪುರದ ಯುವತಿಯ ಕಡೆಯವರು ವಿವಾಹ ಕಾರ್ಯ ನಡೆಸಲು ಭಾನುವಾರ ಮನೆಗೆ ದಿಬ್ಬಣದೊಂದಿಗೆ ಬರಲು ತೀರ್ಮಾನಿಸಿರುವ ವಿಚಾರ ಅರಿತ ಯುವಕ ಇಕ್ಕಟ್ಟಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.ಈ ಬಗ್ಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.