dtvkannada

ಕಡೂರು: ದೇಗುಲದ ಹುಂಡಿಯಲ್ಲಿ ಸಿಕ್ಕಿದ ಲಕ್ಷಾಂತರ ರೂ ಮೌಲ್ಯದ ಹಳೇ ನೋಟುಗಳನ್ನು ಬದಲಾಯಿಸಿ ಹೊಸ ನೋಟು ಕೊಟ್ಟರೆ 30% ಕಮಿಷನ್ ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ 10 ಲಕ್ಷದ ಬದಲು ಕಾಗದದ ತುಂಡನ್ನು ನೀಡಿ ವಂಚಿಸಿದ ಆರೋಪದಡಿ ಆವರು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸರು ಬಂಧಿಸಿದ್ದಾರೆ.

ತಮ್ಮ ಬಳಿ ದೇವಸ್ಥಾನಗಳ ಹುಂಡಿಯಲ್ಲಿ ಭಕ್ತರು ಹಾಕಿದ್ದ ರೂ.100 ಮುಖ ಬೆಲೆಯ ರೂ.10 ಲಕ್ಷ ಮೌಲ್ಯದ ನೋಟುಗಳಿದ್ದು, ಆವುಗಳನ್ನು ವಿಲೇವಾರಿ ಮಾಡಲು ತೊಂದರೆ ಆಗಿದೆ. ಈ ನೋಟುಗಳನ್ನು ಪಡೆದು ರೂ.500, 2000 ಮುಖಬೆಲೆಯ ನೋಟುಗಳನ್ನು ಕೊಡುವವರಿಗೆ ಶೇ.30ರಷ್ಟು ಕಮಿಷನ್ ನೀಡುವುದಾಗಿ ನಂಬಿಸಿ ಉಜಿರೆಯ ಕೃಪಾ ಎಂಬವರಿಂದ ರೂ.10 ಲಕ್ಷ ಪಡೆದು ವಂಚಿಸಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ತಿಂಗಳಾಡಿಯ ಕೊರಗಪ್ಪ ಎಂಬವರು ನೀಡಿದ್ದ ದೂರಿನ ಜಾಡು ಹಿಡಿದು ತನಿಖೆ ನಡೆಸಿದ್ದ ಕಡೂರು ಪೊಲೀಸರು ಆರೋಪಿಗಳ ದೂರವಾಣಿ ಸಂಖ್ಯೆ, ವಿಳಾಸ ಆಧರಿಸಿ ಕಾರ್ಯಾಚರಣೆ ನಡೆಸಿದ್ದರು. ನ.20 ರಂದು ಕಡೂರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಡೂರು ನಿವಾಸಿ ಮಹೇಶ್(40) ಮತ್ತು ಬೆಟ್ಟಂಪಾಡಿ ರೆಂಜ ಅರಂತನಡ್ಕದ ನಾರಾಯಣ ರೈ(52ವ.)ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಬಂಧಿತ ಆರೋಪಿಗಳು, ಸ್ವಾಮೀಜಿ ವೇಷ ಧರಿಸಿ ವಂಚಿಸುತ್ತಿದ್ದ ಖಾವಿ ಬಟ್ಟೆ, ರುದ್ರಾಕ್ಷಿ ಸರ, 100 ರೂ.ಮುಖ ಬೆಲೆಯ ಹಳೆಯ ನೋಟ್‌ಗಳಿದ್ದ ಬ್ಯಾಗ್ ಮತ್ತು ಆಕ್ಟೀವಾ ಸ್ಕೂಟರನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು.

ಆರೋಪಿಗಳು ಏನು ಮಾಡುತ್ತಿದ್ದರು:
ತಮ್ಮಲ್ಲಿ ಕೆಲವರಿಗೆ ಪರಿಚಿತರಾಗಿರುವ ತಿಂಗಳಾಡಿಯ ಕೊರಗಪ್ಪ ಪೂಜಾರಿ ಎಂಬವರನ್ನು ಸಂಪರ್ಕಿಸಿದ್ದ ಆರೋಪಿಗಳು ಕಮಿಷನ್ ಹಣದ ವಿಷಯ ಪ್ರಸ್ತಾಪಿಸಿ ಈ ವಿಚಾರವನ್ನು ಬೇರೆಯವರಿಗೂ ತಿಳಿಸಲು ಹೇಳಿದ್ದರು.

ಅದರಂತೆ ಕೊರಗಪ್ಪ ಅವರು ತಮಗೆ ಪರಿಚಯದ ಉಜಿರೆಯ ಕೃಪಾ ಅವರಿಗೆ ವಿಷಯ ತಿಳಿಸಿದ್ದರು. 30% ಕಮಿಷನ್ ಆಸೆಯಿಂದ ಕೃಪಾ ಅವರು ತಮ್ಮ ಸ್ನೇಹಿತರಾದ ಭುವನೇಂದ್ರ ಮತ್ತು ಜನಾರ್ದನ ಎಂಬವರೊಂದಿಗೆ ಆಗಮಿಸಿ 10 ಲಕ್ಷ ರೂ ನಗದನ್ನು ಕಡೂರಿನ ಕೋಟೆ ಭಾಗದ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಆರೋಪಿಗಳಿಗೆ ನೀಡಿದ್ದರು.
ಈ ವೇಳೆ ಆರೋಪಿಗಳು, ಇದರಲ್ಲಿ ರೂ.13 ಲಕ್ಷ ರೂ. ಇದೆ, ಮತ್ತೆ ಎಣಿಸಿಕೊಳ್ಳಿ’ ಎಂದು ಹೇಳಿ, ನೋಟುಗಳಿಂದ ತುಂಬಿದಂತಿದ್ದ ಬ್ಯಾಗೊಂದನ್ನು ಕೃಪಾ ಅವರಿಗೆ ನೀಡಿ ಅಲ್ಲಿಂದ ಪರಾರಿಯಾಗಿದ್ದರು.

ಬಳಿಕ ಕೃಪಾ ಹಾಗೂ ಜೊತೆಗಿದ್ದ ಭುವನೇಂದ್ರ ಮತ್ತು ಜನಾರ್ದನ ಅವರು, 13 ಲಕ್ಷ ರೂ.ಇರುವುದಾಗಿ ಹೇಳಿ ಆರೋಪಿಗಳು ನೀಡಿದ್ದ ಬ್ಯಾಗ್‌ನ್ನು ತೆರೆದು ನೋಡಿದಾಗ, ಅದರಲ್ಲಿ ನೋಟಿನ ಗಾತ್ರದ ಬಿಳಿ ಕಾಗದದ ತುಂಡುಗಳ ಕಟ್ಟಿನ ಮೇಲ್ಭಾಗದಲ್ಲಿ ಮಾತ್ರ 100 ನೋಟ್‌ಗಳನ್ನಿಟ್ಟಿರುವುದು ಕಂಡು ಬಂದಿದ್ದು,
ಕಮಿಷನ್‌ನ ಆಸೆಯಿಂದಾಗಿ ತಾವು ಮೋಸ ಹೋಗಿರುವುದು ಅವರ ಅರಿವಿಗೆ ಬಂದಿದೆ. ಕೂಡಲೇ ಕೃಪಾ ಅವರು ಆರೋಪಿಗಳಿಗೆ ಕರೆ ಮಾಡಿದರು.

ಆದರೆ ಅವರೆಲ್ಲರ ಮೊಬೈಲ್‌ಗಳು ಸ್ವಿಚ್ಡ್​ ಆಫ್ ಆಗಿದ್ದವು. ವಂಚನೆಗೊಳಗಾದ ಕೃಪಾ ಅವರು ನ.18ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ವೇಳೆ ಪೊಲೀಸರು ಕೃಪಾ ಅವರಿಗೆ ಮಾಹಿತಿ ನೀಡಿದ್ದ ಕೊರಗಪ್ಪ ಅವರನ್ನು ವಿಚಾರಿಸಿದರು.
ಬಳಿಕ ಕೊರಗಪ್ಪ ಅವರು ನೀಡಿದ ದೂರು,

ಮಾಹಿತಿ ಆಧರಿಸಿ ತನಿಖೆ ನಡೆಸಿದ ಕಡೂರು ಪೊಲೀಸರು 48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳದ ತಯ್ಯುಬ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಅರಂತನಡ್ಕ ನಿವಾಸಿ ನಾರಾಯಣ ರೈ ಅವರನ್ನು ಕಡೂರು ಪೊಲೀಸರು ಬಂಧಿಸಿರುವ ವಿಚಾರ ಅವರ ಮನೆಯವರಿಗೆ ತಿಳಿದಿರಲಿಲ್ಲವಾದ್ದರಿಂದ ನಾರಾಯಣ ರೈ ಅವರು ಮನೆಗೆ ಬಂದಿಲ್ಲ ಎಂದು ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ನಾರಾಯಣ ರೈ ಅವರನ್ನು ಕಡೂರು ಪೊಲೀಸರು ಪ್ರಕರಣವೊಂದರ ಬಗ್ಗೆ ಬಂಧಿಸಿದ್ದ ವಿಚಾರ ಆಗಸ್ಟೇ ಅವರಿಗೆ ತಿಳಿದಿದೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಕಡೂರು ಪೊಲೀಸ್ ಠಾಣೆಯ ಪೊಲೀಸ್‌ ಇನ್ಸ್ಪೆಕ್ಟರ್‌ ರಮ್ಯಾ,
ಎಸ್‌ಐಗಳಾದ ಆದರ್ಶ್, ನವೀನ್, ಎಎಸ್ಸೈ ವೇದಮೂರ್ತಿ, ಸಿಬ್ಬಂದಿ ಕೃಷ್ಣಮೂರ್ತಿ,
ಉಮೇಶ್, ರಾಜಪ್ಪ, ಮಧುಕುಮಾರ್, ಓಂಕಾರ್ ಮತ್ತು ಶಿವರಾಜ್ ಪಾಲ್ಗೊಂಡಿದ್ದರು.

By dtv

Leave a Reply

Your email address will not be published. Required fields are marked *

error: Content is protected !!