ಪುತ್ತೂರು: ಇಲ್ಲಿನ ಕೊಂಬೆಟ್ಟು ಸರಕಾರಿ ಕಾಲೇಜು ವಿಧ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ ಹಾಗೂ ಶೀಘ್ರ ಆ ಕೃತ್ಯವೆಸಗಿದ ವಿದ್ಯಾರ್ಥಿ ಗೂಂಡಾ ಪಡೆಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗುಸಬೇಕು ಎಂದು ಪುತ್ತೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೋನು ಬಪ್ಪಳಿಗೆ ಅವರು ಆಗ್ರಹಿಸಿದ್ದಾರೆ.
ಸದಾ ಶಾಂತಿ, ಸಾಮರಸ್ಯ, ಸೌಹಾರ್ದತೆಗೆ ಪ್ರಸಿದ್ಧಿ ಪಡೆದ ಪುತ್ತೂರಿನಲ್ಲಿ ವರ್ಷಗಳಿಂದೀಚೆಗೆ ಕೆಲವು ಕೋಮುವಾದಿ ರಾಜಕೀಯ ಪಕ್ಷಗಳು ತನ್ನ ರಾಜಕೀಯ ನೆಲೆ ಕಂಡುಕೊಳ್ಳಲು ವಿಧ್ಯಾರ್ಥಿ ಸಂಘಟನೆಗಳನ್ನು ಛೂ ಬಿಟ್ಟು ಸಮಾಜದ ಸ್ವಾಸ್ಥ್ಯ ಕೆಡವುವ ವಿಫಲ ಪ್ರಯತ್ನಕ್ಕೆ ಕೈ ಹಾಕಿದ್ದು, ಈ ಬಗ್ಗೆ ಪ್ರಜ್ಞಾವಂತ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ವಿಧ್ಯಾರ್ಥಿಗಳ ತಲೆಗೆ ಕೋಮು ವಿಷ ಬೀಜ ಬಿತ್ತುವ ಧರ್ಮಾಧಾರಿತ ವಿಧ್ಯಾರ್ಥಿ ಸಂಘಟನೆಗಳನ್ನು ಶಾಲಾ ಪರಿಸರದಿಂದಲೇ ದೂರ ಇಡುವಂತೆ ಶಾಲಾ ಆಡಳಿತ ಮಂಡಳಿಗಳು ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅವಶ್ಯಕತೆ ಇದ್ದು, ಈ ತ್ರಿಶೂಲ ವಿತರಕರಿಂದ, ಕಬರ್ ಸ್ಥಾನ ತೋರಿಸುವವರಿಂದ ಉತ್ತಮ ಸಮಾಜ ಕಟ್ಟಬೇಕಾದ ವಿಧ್ಯಾರ್ಥಿಗಳು ಅಂತರ ಕಾಯ್ದುಕೊಳ್ಳಬೇಕು ಎಂದು ವಿಧ್ಯಾರ್ಥಿಗಳಲ್ಲಿ ವಿನಂತಿಸಿದ್ದಾರೆ.