ಪುತ್ತೂರು : ಭ್ರಾತೃತ್ವವನ್ನು ಮೂಡಿಸಬೇಕಾಗಿದ್ದಂತಹ ಕಾಲೇಜ್ ಕ್ಯಾಂಪಸ್ ಗಳಲ್ಲಿ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಜನೆಗಾಗಿ ಬರುವಂತಹ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮುಭಾವನೆಗಳನ್ನು ಮೂಡಿಸಿ ವಿದ್ಯಾರ್ಥಿಗಳ ನಡುವೆಯೇ ಕಂದಕಗಳನ್ನು ಸೃಷ್ಟಿಸಿ ಅನೈಕ್ಯತೆಗೆ ಕಾರಣವಾಗುತ್ತಿರುವ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ಖೇದಕರ.
ಪುತ್ತೂರು ತಾಲ್ಲೂಕಿನಲ್ಲೇ ಕಳೆದೊಂದು ತಿಂಗಳಿನಿಂದೀಚೆಗೆ ಹಲವಾರು ಪ್ರಕರಣಗಳು ದಾಖಲಿಸಲ್ಪಟ್ಟರೂ ಕಾನೂನು ಪಾಲಕರು ಅದನ್ನು ಮಟ್ಟಹಾಕುವ ಪ್ರಯತ್ನ ನಡೆಸದೇ ಇರುವುದರಿಂದ ಅದನ್ನೇ ಬಂಡವಾಳವನ್ನಾಗಿಸಿಕೊಂಡ ವಿದ್ಯಾರ್ಥಿಗಳು ಕಾಲೇಜ್ ಕ್ಯಾಂಪಸ್ ನೊಳಗೆ ತ್ರಿಶೂಲಗಳನ್ನು ತಂದು ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡುವಷ್ಟರ ಮಟ್ಟಿಗೆ ಮುಂದುವರಿದದ್ದು ಖಂಡನೀಯ.
ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾದ ವಿದ್ಯಾರ್ಥಿಗಳೇ ಅನೈತಿಕತೆಗೆ ಕಾರಣವಾಗಿ ಆಸ್ಪತ್ರೆ, ಸ್ಟೇಷನ್ ಅಂತ ಅಲೆದಾಡುವುದು ವಿದ್ಯಾರ್ಥಿ ಬದುಕಿಗೆ ಪೂರಕವಾದ ವಾತಾವರಣವಲ್ಲ.ದಿನದಿಂದ ದಿನಕ್ಕೆ ಇಂತಹ ಪ್ರಕರಣಗಳು ಹೆಚ್ಚಾಗಿ ಮರುಕಳಿಸುತ್ತಿರುವುದರಿಂದ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲೂ ಕೂಡ ಹೆತ್ತವರು ಆತಂಕ ಪಡುವಂತಹ ವಾತಾವರಣಗಳು ಸೃಷ್ಟಿಯಾಗಿದೆ.
ಹೊರಗಿನ ಶಕ್ತಿಗಳು ಕೂಡ ಇದರ ಲಾಭ ಪಡೆದು ನಾಡಿನ ಸೌಹಾರ್ದತೆಯನ್ನು ಕೆಡಿಸುವ ಸಾಧ್ಯತೆಗಳಿರುವುದರಿಂದ ಕಾನೂನು ಪಾಲಕರು ಸೂಕ್ತವಾದ ಕ್ರಮಗಳನ್ನು ಕೈಗೊಂಡು ಕ್ಯಾಂಪಸ್ ಗಳಲ್ಲಿ ನಡೆಯುವ ಅನೈಕ್ಯತೆಗಳಿಗೆ ಕಡಿವಾಣ ಹಾಕಬೇಕೆಂದು ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಆಗ್ರಹಿಸಿದೆ.