ಪ್ರತಿರೋಧವೋ ಪ್ರತಿಭಟನೆಯೋ ಎಂಬ ಚರ್ಚೆ ಬದಿಗಿರಲಿ. ಪೆನ್ನು, ಪುಸ್ತಕ ಹಿಡಿದು ವಿದ್ಯೆ ಎಂಬ ಸಂಪತ್ತನ್ನು ಸಂಗ್ರಹಿಸಬೇಕಾದ ಹುಡುಗರು ಕತ್ತಿ, ಚಾಕು, ತ್ರಿಶೂಲ ಹಿಡಿದು ಶಾಲಾ ಕಾಲೇಜು ಆವರಣದೊಳಗೆ ತಿರುಗಾಡುವಂತಾಗಿದ್ದು ಹೇಗೆ ಎಂಬುದರ ಬಗ್ಗೆ ಗಂಭೀರ ಅವಲೋಕನ ಆಗಬೇಕಿದೆ. ಜ್ಞಾನವೇ ಧರ್ಮವೆಂಬ ಮನೋಭಾವದೊಂದಿಗೆ ಮುನ್ನಡೆಯಬೇಕಿದ್ದ ವಿದ್ಯಾಸಂಸ್ಥೆಗಳಲ್ಲಿ ರಾಜಕೀಯ ಪಕ್ಷಗಳ ಪುಂಡಾಟಿಕೆಗೆ ಹೇಗೆ ಅವಕಾಶ ದೊರಕಿದೆ ಎಂಬುದು ಕೂಡ ಅರ್ಥ ಮಾಡಿಕೊಳ್ಳಬೇಕಿದೆ.
ಕಾನೂನುಗಳು ಸ್ವಾರ್ಥಕ್ಕಾಗಿ ಬಳಕೆಯಾಗತೊಡಗಿದಾಗಲೇ ಇಲ್ಲಿ ಗಲಭೆಗಳು ಜ್ವಲಂತ ಸಮಸ್ಯೆಯಾಗಿ ಉದ್ಭವಿಸಿದ್ದು. ಧರ್ಮ-ಧರ್ಮಗಳ ನಡುವೆ ವಿಷ ಕಾರುವಂತೆ ವೇದಿಕೆಯೇರಿ ಪ್ರಚೋದಿಸುವ ಸ್ವಘೋಷಿತ ನಾಯಕರೇ ಪ್ರತಿಯೊಂದು ಸಮಸ್ಯೆಗೂ ಮೂಲ ಕಾರಣ. ಮುಂದಿನ ಜನಾಂಗಕ್ಕೆ ಮಾದರಿಯಾಗಿ ಬೆಳೆಯಬೇಕಿದ್ದ ವಿದ್ಯಾರ್ಥಿಗಳೇ ಇವತ್ತು ಇಡೀ ಸಮಾಜಕ್ಕೆ ಮಾರಕವಾಗಿ ಮಾರ್ಪಾಡಾಗುತ್ತಿದ್ದಾರೆಂದರೆ ಅವರೊಳಗೆ ಯಾವ ರೀತಿಯಲ್ಲಿ ಕೋಮುದ್ವೇಷದ ವಿಷಬೀಜ ಬಿತ್ತಲಾಗಿದೆ..! ಖಂಡಿತವಾಗಿಯೂ ಇದು ಬಹಳ ಅಪಾಯಕಾರಿ.
ಇವತ್ತು ಹಲ್ಲೆ ಮಾಡಿದವರು ಕಾನೂನಿನ ಶಿಕ್ಷೆಯಿಂದ ನಿರಾಯಾಸವಾಗಿ ತಪ್ಪಿಸಿಕೊಳ್ಳುತ್ತಾರೆ. ಕಾರಣ ಅವರಿಗೆ ಎಲ್ಲಾ ರೀತಿಯ ಸಂರಕ್ಷಣೆಯನ್ನು ಅವರನ್ನು ಕಾಲೇಜು ಗೂಂಡಾಗಳಾಗಿ ಪರಿವರ್ತಿಸಿದ ನಾಯಕರೇ ನೀಡುತ್ತಾರೆ. ಒಂದರ್ಥದಲ್ಲಿ ಅದು ಅವರಿಗೆ ಪ್ರಚೋದನೆಯೂ ಕೂಡ ಹೌದು. ಮುಂದಕ್ಕೆ ಅವರೊಳಗಿನ ಕೋಮುದ್ವೇಷ ಮತ್ತಷ್ಟು ಬೆಳೆಯುತ್ತದೆ. ಅದು ಇಡೀ ಸಮಾಜವನ್ನು ನಿರ್ನಾಮ ಮಾಡಬಲ್ಲದು. ಮೊದಲೇ ಕದಡಿರುವ ಶಾಂತಿಯುತ ವಾತಾವರಣವನ್ನು ಮತ್ತಷ್ಟು ಅಲ್ಲೋಲಕಲ್ಲೋಲವಾಗಿಸಬಹುದು. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರನ್ನು ಮತ್ತು ಅದಕ್ಕೆ ಕಾರಣರಾದವರನ್ನು ಕಾನೂನು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತೆ ಎಂಬುದರ ಬಗ್ಗೆ ಹೆಚ್ಚಿನ ನಿರೀಕ್ಷೆಯಿಲ್ಲವಾದರೂ ಒಂದು ಕೋರಿಕೆಯಿದೆ. ಸಮಾಜದಲ್ಲಿ ಮತ್ತಷ್ಟು ಭಯೋತ್ಪಾದಕರ ಹುಟ್ಟಿಗೆ ಕಾರಣರಾಗಬೇಡಿ. ತಪ್ಪಿತಸ್ಥರಿಗೆ ತಕ್ಕದಾದ ಶಿಕ್ಷೆ ನೀಡಿರಿ. ವಿದ್ಯಾ ದೇಗುಲಗಳಿಗೆ ಕೋಮುಬಣ್ಣ ಬಳಿಯಲು ಬಿಡದೇ ಸಂರಕ್ಷಿಸಿರಿ. ಇನ್ನೊಂದು ಅಹಿತಕರ ಘಟನೆ ನಡೆಯದಿರಲಿ.
ಬರಹಗಾರ;ಹಕೀಂ ಪದಡ್ಕ