ಮಂಗಳೂರು: ಓಮಿಕ್ರಾನ್ ವೈರಸ್ ರಾಜ್ಯಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಈಗಾಗಲೇ ದಿನಾಂಕ ಖಚಿತಗೊಂಡಿರುವ ಉರೂಸ್ ಕಾರ್ಯಕ್ರಮಗಳು ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ತಿಂಗಳ ಆರಂಭದಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉರೂಸ್ ನಡೆಸುವ ಕುರಿತು ಆಯಾ ಆಡಳಿತ ಸಮಿತಿ ತೀರ್ಮಾನ ಕೈಗೊಂಡು ದಿನಾಂಕ ಪ್ರಕಟಿಸಿ ಪ್ರಚಾರವನ್ನೂ ನಡೆಸಿತ್ತು. ಇದರ ನಡುವೆ ಓಮಿಕ್ರಾನ್ ವೈರಸ್ ರಾಜ್ಯಕ್ಕೆ ಕಾಲಿಟ್ಟಿರುವ ಕಾರಣ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಉರೂಸನ್ನು ಮುಂದೂಡಲು ಆಯಾ ಸಮಿತಿಯ ಜೊತೆ ಜಿಲ್ಲಾಧಿಕಾರಿ ಮಾತುಕತೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಈಗಾಗಲೇ ದಕ್ಷಿಣ ಕರ್ನಾಟಕದ ಅಜ್ಮೀರ್ ಎಂದೇ ಖ್ಯಾತಿಯಾದ ಉಳ್ಳಾಲದ ಉರೂಸನ್ನು ಎರಡು ತಿಂಗಳು ಮುಂದೂಡಿ ಆಡಳಿತ ಸಮಿತಿ ತೀರ್ಮಾನ ಕೈಗೊಂಡಿದೆ. ಜೊತೆಗೆ ಉಳ್ಳಾಲದಲ್ಲಿ ಹೊರರಾಜ್ಯದ ಭಕ್ತಾದಿಗಳು ಹೆಚ್ಚು ಸೇರುವುದರಿಂದ ಉಳ್ಳಾಲದ ಉರೂಸ್ ಮಾತ್ರ ಮುಂದೂಡಿ, ಇತರ ಮೊಹಲ್ಲಾದ ಉರೂಸ್ ಯಥಾಸ್ಥಿತಿಯಂತೆ ನಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಸಧ್ಯಕ್ಕೆ ಯಾವುದೆ ನಿಖರ ಮಾಹಿತಿ ಲಭ್ಯವಾಗಿಲ್ಲ.