ಕೋಮು ಉನ್ಮಾದ ಸೃಷ್ಟಿಸಿ ರಾಜ್ಯದಲ್ಲಿ ಗಲಭೆ ನಡೆಸಲು ಯೋಜನೆ ಸಿದ್ಧವಾಗುತ್ತಿದ್ದು, ಸಂಘಪರಿವಾರದ ಈ ಷಡ್ಯಂತ್ರದ ವಿರುದ್ಧ ರಾಜ್ಯದ ಜನತೆ ಎಚ್ಚರದಿಂದ ಇರಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಘಟನೆಗಳು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳನ್ನು ಗಮನಿಸಿದರೆ, ಅಪಾಯದ ಮುನ್ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಗೋ ಹತ್ಯೆ, ಲವ್ ಜಿಹಾದ್, ಮತಾಂತರದ ನೆಪದಲ್ಲಿ ಸಂಘಪರಿವಾರದ ಗೂಂಡಾಗಳ ಅನೈತಿಕ ಪೊಲೀಸ್ ಗಿರಿ ಮಿತಿಮೀರುತ್ತಿದೆ. ಪ್ರತಿಯೊಂದು ಸಣ್ಣಪುಟ್ಟ ಘಟನೆಗಳಿಗೂ ಕೋಮು ಬಣ್ಣವನ್ನು ನೀಡಲಾಗುತ್ತಿದೆ. ಸಂಘಪರಿವಾರ ನಡೆಸಿದ ತ್ರಿಶೂಲ ದೀಕ್ಷೆಯ ಬಳಿಕ ನಿರ್ದಿಷ್ಟ ಸಮುದಾಯದ ಯುವಕರನ್ನು ಗುರಿಪಡಿಸಿಕೊಂಡು ನಡೆಸುವ ಹಿಂಸಾಕೃತ್ಯಗಳು ಅಧಿಕವಾಗಿವೆ. ರಾಜ್ಯದ ವಿವಿಧ ಕಡೆಗಳಲ್ಲಿ ಹಿಂದೂ ಜನ ಜಾಗೃತಿ ವೇದಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಸಭೆಗಳಲ್ಲಿ ಸಂಘಪರಿವಾರದ ನಾಯಕರ ಕೋಮು ಪ್ರಚೋದನಾಕಾರಿ ಹೇಳಿಕೆಗಳು ವಿಜೃಂಭಿಸುತ್ತಿವೆ. ಮನೆಗಳಲ್ಲಿ ತಲವಾರು ಸಂಗ್ರಹಿಸಿಟ್ಟುಕೊಳ್ಳುವಂತೆ ಕಾರ್ಯಕರ್ತರಿಗೆ ಪ್ರಚೋದಿಸಲಾಗುತ್ತಿದೆ. ಆಝಾನ್ ವಿಚಾರವನ್ನು ಸದಾ ವಿವಾದದಲ್ಲಿರುವಂತೆ ಹೇಳಿಕೆಗಳನ್ನು ನೀಡಲಾಗುತ್ತಿದೆ. ಶ್ರೀರಂಗಪಟ್ಟಣದ ಐತಿಹಾಸಿಕ ಮಸೀದಿಯನ್ನು ವಿವಾದಕ್ಕೆ ಒಳಪಡಿಸಿ ಅದರ ಹೆಸರಿನಲ್ಲಿ ಕೋಮು ವೈಷಮ್ಯ ಹರಡುವ ಪ್ರಯತ್ನ ನಡೆಸಲಾಗುತ್ತಿದೆ. ಮತಾಂತರದ ಆರೋಪ ಹೊರಿಸಿ ಕ್ರೈಸ್ತ ಧರ್ಮೀಯರ ಪ್ರಾರ್ಥನಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಧರ್ಮಗುರುಗಳು ಮತ್ತು ಭಕ್ತರ ಮೇಲೆ ಹಲ್ಲೆ ನಡೆಸುತ್ತಿರುವ ಮತ್ತು ಅವರ ಧಾರ್ಮಿಕ ಗ್ರಂಥಗಳನ್ನು ಸುಟ್ಟು ಹಾಕುವ ವಿಚಾರ ಸರ್ವೇ ಸಾಮಾನ್ಯವಾಗುತ್ತಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದರೂ, ಬಿಜೆಪಿ ಸರಕಾರದ ಭಾಗವಾಗಿರುವ ಮುಖ್ಯಮಂತ್ರಿ ಮತ್ತು ಶಾಸಕರು ಅದನ್ನು ನಿಯಂತ್ರಿಸುವ ಬದಲಿಗೆ ದುಷ್ಕರ್ಮಿಗಳಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ , ಶೇ.40 ಕಮಿಷನ್ ವಿಚಾರ ಗಂಭೀರ ಸದ್ದು ಮಾಡಿದೆ ಮತ್ತು ಅತಿವೃಷ್ಟಿಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಮಾತ್ರವಲ್ಲ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾದ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ಕಾನೂನು ಜಾರಿ ತರುವ ವಿಚಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಒಂದರ್ಥದಲ್ಲಿ ಗಂಭೀರ ಆಡಳಿತಾತ್ಮಕ ವೈಫಲ್ಯವನ್ನು ಮರೆಮಾಚಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ಕೋಮು ಧ್ರುವೀಕರಣ ನಡೆಸುವ ಶತ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡುತ್ತಿದೆ.
ಹಿಂಸಾಕೃತ್ಯಗಳ ಮೂಲಕ ರಾಜ್ಯವನ್ನು ಸದಾ ಅರಾಜಕತೆಯಲ್ಲಿಡುವುದು ಸಂಘಪರಿವಾರದ ಫ್ಯಾಶಿಸ್ಟ್ ನೀತಿಯ ಯೋಜನೆಯಾಗಿದೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಕೋಮು ಧ್ರುವೀಕರಣ ನಡೆಸುವುದರಲ್ಲಿ ಆರೆಸ್ಸೆಸ್-ಸಂಘಪರಿವಾರವು ಸಿದ್ಧಹಸ್ತವಾಗಿದೆ. ಪ್ರಸಕ್ತ ನಡೆಯುತ್ತಿರುವ ಬೆಳವಣಿಗೆಗಳಿಂದ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳನ್ನು ಭೀತಿಯಲ್ಲಿಡಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಶಾಂತಿ, ಸೌಹಾರ್ದತೆಯ ವಿರೋಧಿಯಾಗಿರುವ ಸಂಘಪರಿವಾರವು ಇಂತಹ ಹಿಂಸಾಚಾರಗಳ ಮೂಲಕ ರಾಜ್ಯವನ್ನು ಅಶಾಂತಿಯ ತಾಣವನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಿದೆ. ಕರುನಾಡ ಜನತೆ ಸಂಘಪರಿವಾರದ ಈ ದುಷ್ಕೃತ್ಯಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಗಲಭೆ ನಡೆಸುವ
ಈ ದುಷ್ಟ ಯೋಜನೆಗಳನ್ನು ವಿಫಲಗೊಳಿಸಲು ಮುಂದಾಗಬೇಕೆಂದು ಯಾಸಿರ್ ಹಸನ್ ಕರೆ ನೀಡಿದ್ದಾರೆ.