ಮಂಗಳೂರು: ಅಡ್ಯಾರ್ ಪದವು ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಅಡ್ಯಾರ್ ಪದವು ನಿವಾಸಿ ಮಹಮ್ಮದ್ ರಿಯಾಜ್ ಎಂಬಾತನ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗಣೇಶ್ (23), ಚೇತನ್ (21), ಕೀರ್ತಿ ರಾಜ್(23), ಸುವೀತ್ (19), ಪರೀಕ್ಷಿತ್ (20) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ
ಡಿ.10 ರ ರಾತ್ರಿ 7.30ರ ಸುಮಾರಿಗೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೊಂಡಂತಿಲ ಗ್ರಾಮ ಪಡು ಎಂಬಲ್ಲಿ ಅಡ್ಯಾರ್ ಪದವು ಗ್ರಾಮದ ನಿವಾಸಿಯಾದ ಮೊಹಮ್ಮದ್ ರಿಯಾಜ್ ತಮ್ಮ ಕಾರಿನಲ್ಲಿ ತಮ್ಮ ಮನೆಯ ಕಡೆಗೆ ತೆರಳುತ್ತಿದ್ದರು.
ಈ ವೇಳೆ 7 ರಿಂದ 8 ಜನ ಆರೋಪಿಗಳು ಬೈಕ್‌ನಿಂದ ಕಾರನ್ನು ಅಡ್ಡಗಟ್ಟಿ, ಕಾರಿನಲ್ಲಿದ್ದ ಮೊಹಮ್ಮದ್ ರಿಯಾಜ್ ನನ್ನು ಕಾರಿನಿಂದ ಎಳೆದು ಹೊರಕ್ಕೆ ತಂದು ಬ್ಯಾಟ್, ರಾಡ್ ಮತ್ತು ಬೀಯರ್ ಬಾಟಲಿಗಳಿಂದ ತಲೆಗೆ, ಕಣ್ಣಿಗೆ ಹೊಡೆದು ಪರಾರಿಯಾಗಿದ್ದರು.
ಈ ಸಂಬಂಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ 5 ಜನರನ್ನು ಬಂಧಿಸಿದ್ದು, ಉಳಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.