ಮಂಗಳೂರು, ಡಿ. 14: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ವತಿಯಿಂದ ತನ್ನ ಸದಸ್ಯರ ಕುಟುಂಬಗಳಿಗಾಗಿ ಕೋಸ್ಟಲ್ ಫ್ರೆಂಡ್ಸ್ ಚಿಲ್ಡ್ರನ್ಸ್ ಫೆಸ್ಟ್ ಹಾಗೂ ಫ್ಯಾಮಿಲಿ ಮೀಟ್ 2021 ಕಾರ್ಯಕ್ರಮವು ಕುತ್ತಾರಿನ ಡೆಕ್ಕನ್ ಗಾರ್ಡನ್ ಫಾರ್ಮ್ ಹೌಸ್‌ನಲ್ಲಿ ಡಿ.11 ರಂದು ಜರುಗಿತು.
ಸಾಮಾಜಿಕ ಕಾರ್ಯಕರ್ತರನ್ನೊಳಗೊಂಡ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ತನ್ನ ಸದಸ್ಯರ ಕುಟುಂಬಗಳಿಗಾಗಿ ಮಾನಸಿಕ ನೆಮ್ಮದಿ, ಆರೋಗ್ಯಕರ ಜೀವನ ಮತ್ತು ತಂಡದೊಳಗಿನ ಮಾನವ ಸಂಬಂಧಗಳ ಮೌಲ್ಯಗಳ ಅರಿವು ಮೂಡಿಸಲು ಆಯೋಜಿಸಿದ್ದ ಈ ಕಾರ್ಯಕ್ರಮವು ತನ್ನ ಸದಸ್ಯರ ಕುಟುಂಬದಲ್ಲಿ ಹೊಸ ಹುರುಪನ್ನು ಸೃಷ್ಟಿಸಿತ್ತು. ಚಿಲಿಪಿಲಿ ಚಿಣ್ಣರಿಗಾಗಿ, ಮಕ್ಕಳಿಗಾಗಿ, ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ತಂಡ ಆಯೋಜಿಸಲಾಗಿತ್ತು.
ಫಾರ್ಮ್ ಹೌಸ್‌ನೊಳಗಿನ ಈಜುಕೊಳದಲ್ಲಿ ಈಜಾಡುತ್ತಾ ಆಟವಾಡುತ್ತಾ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ನೆರೆಯ ಕಾಸರಗೋಡಿನ ಲೈವ್ ಜ್ಯೂಸ್, ಚರ್ಮುರಿ ಪಾನಿಪೂರಿಯನ್ನು ಕುಟುಂಬ ಸಮೇತ ಸದಸ್ಯರೆಲ್ಲರೂ ಆಸ್ವಾದಿಸಿದರು.
ವೇದಿಕೆಯಲ್ಲಿ ಸಿರಾಜುದ್ದೀನ್ ಪರ್ಲಡ್ಕ, ಮುನ್ನ ಕಮ್ಮರಡಿ, ಸಲಾಂ ಸಮ್ಮಿ, ಷರೀಫ್ ವಳಾಲ್, ಆಸೀಫ್ ಸೂರಲ್ಪಾಡಿ, ಸೈಫ್ ಸುಲ್ತಾನ್ ಉಪಸ್ಥಿತರಿದ್ದು ಭಾಗವಹಿಸಿದವರೆಲ್ಲರಿಗೂ ಬಹುಮಾನ ವಿತರಿಸಿದರು.
ಇದೇ ವೇಳೆ 2021ನೇ ಸಾಲಿನ ಕೋಸ್ಟಲ್ ಫ್ರೆಂಡ್ಸ್ ಅವಾರ್ಡ್ ಅರ್ಹವಾಗಿ ಸಿರಾಜುದ್ದೀನ್ ಪರ್ಲಡ್ಕರವರ ಮುಡಿಗೇರಿತು. ಕಾರ್ಯಕ್ರಮದ ಕೊನೆಯಲ್ಲಿ ಅತ್ಯಾಕರ್ಷಕ ಬಾಡೂಟದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.