ಮಂಗಳೂರು: ಉಪ್ಪಿನಂಗಡಿಯಲ್ಲಿ PFI ನಾಯಕರ ಬಂಧನವನ್ನು ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ ಇಂದು ಮಂಗಳೂರಿನಲ್ಲಿ PFI ವತಿಯಿಂದ ಎಸ್ಪಿ ಕಛೇರಿ ಚಲೋ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿ, ಪೊಲೀಸರು ಹಾಗೂ ಸಂಘಪರಿವಾರದ ವಿರುದ್ಧ ಧಿಕ್ಕಾರ, ಘೋಷಣೆ ಕೂಗಿದರು. ಹಂಪನಕಟ್ಟೆ ವೃತ್ತದಿಂದ ಕ್ಲಾಕ್ ಟವರ್ ರಸ್ತೆಯಲ್ಲಿ ರ್ಯಾಲಿ ಬಂದ ಪ್ರತಿಭಟನಾಕಾರರನ್ನು ಎಸ್ಪಿ ಕಛೇರಿಗೆ ತೆರಳದಂತೆ ಬ್ಯಾರಿಕೇಡ್ ಹಾಕಿ ತಡೆಯಲಾಯಿತು. ನಂತರ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರೆಸಿದ ಪ್ರತಿಭಟನಾಕಾರರು, ಎಸ್ಪಿ ಹಾಗೂ ಕಮೀಷನರ್ ಸ್ಥಳಕ್ಕೆ ಬಂದು ನಮ್ಮ ಅಹವಾಲು ಸ್ವೀಕರಿಸುವಂತೆ ಒತ್ತಾಯ ಮಾಡಿದರು.
ಪ್ರತಿಭಟನಾಕಾರರ ಒತ್ತಾಯದ ಮೇರೆಗೆ ಸ್ಥಳಕ್ಕಾಗಮಿಸಿದ ಎಸ್ಪಿ ಹಾಗೂ ಪೊಲೀಸ್ ಕಮಿಷನರ್ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ, ಕಾನೂನಿನ ಮೂಲಕ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದೆಂದು ಭರವಸೆ ನೀಡಿದರು.
ಪೊಲೀಸರು ಮನವಿ ಸ್ವೀಕರಿಸಿದ ನಂತರ PFI ಕಾರ್ಯಕರ್ತರು ಪ್ರತಿಭಟನೆ ಕೈ ಬಿಟ್ಟು ಸ್ಥಳದಿಂದ ತೆರಳಿದರು.