ಬೆಳ್ಳಾರೆ: ಮನೆಯೊಂದರ ಹಳೆಯ ಗೋಡೆ ಕುಸಿದು ಇಬ್ಬರು ಮಹಿಳೆಯರು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕರಿಂಬಿಲ ನರ್ಲಡ್ಕ ಎಂಬಲ್ಲಿ ನಡೆದಿದೆ.
ನರ್ಲಡ್ಕ ನಿವಾಸಿ ಹರೀಶ ನಾಯ್ಕ ಎಂಬವರ ಮನೆಯ ಹಳೆಯ ಶೌಚಾಲಯದ ಗೋಡೆ ದುರಸ್ತಿ ವೇಳೆ ಈ ದುರ್ಘಟನೆ ನಡೆದಿದೆ.
ಹಳೆಯ ಶೌಚಾಲಯದ ಗೋಡೆಯನ್ನು ತೆಗೆದು ಹೊಸ ಕಟ್ಟಡ ಕಟ್ಟುವುದಕ್ಕಾಗಿ ಕೆಲಸ ಮಾಡಲಾಗುತ್ತಿತ್ತು. ಇತರ ಕೆಲಸಗಾರರ ಜತೆ ಸಮೀಪದ ಮನೆಯ ಬೀಪಾತುಮ್ಮ ಮತ್ತು ನೆಬಿಸಾರವರು ಕಾಮಗಾರಿ ಕೆಲಸದಲ್ಲಿ ತೊಡಗಿದ್ದರು. ಆ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಇವರ ಮೇಲೆ ಕುಸಿದು ಬಿದ್ದಿದೆ.
ಮಣ್ಣಿನ ರಾಶಿಯಲ್ಲಿ ಸಿಲುಕಿದ್ದ ಇವರನ್ನು ಕೂಡಲೇ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದಾದರೂ ಕಾಣಿಯೂರು ತಲುಪುವಾಗ ಬೀಪಾತುಮ್ಮ(6೦) ರವರು ಕೊನೆಯುಸಿರೆಳೆದಿದ್ದಾರೆ.
ಅವರ ಮೃತ ದೇಹವನ್ನು ಹಿಂತಿರುಗಿ ನರ್ಲಡ್ಕಕ್ಕೆ ತರಲಾಗಿದೆ. ಗಾಯಗೊಂಡಿದ್ದ ಇನ್ನೊರ್ವ ಮಹಿಳೆ ನೆಬಿಸ (45 ವರ್ಷ) ರವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಆಸ್ಪತ್ರೆ ತಲುಪುವ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.