ಮೈಸೂರು: ಕುಡಿದ ಮತ್ತಿನಲ್ಲಿ ಆ್ಯಂಬುಲೆನ್ಸ್ ಅರ್ಧ ದಾರಿಯಲ್ಲಿ ನಿಲ್ಲಿಸಿ, ಆಂಬುಲೆನ್ಸ್ ಒಳಗಿದ್ದ ರೋಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.
![](http://dtvkannada.in/wp-content/uploads/2021/12/IMG-20211227-WA0003-1024x576.jpg)
ಹಾಸನದ ಸಿದ್ದಾಪುರ ಗ್ರಾಮದ ತೀರ್ಥಾನಂದ(30) ಮೃತಪಟ್ಟವರು. ತೀರ್ಥಾನಂದ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಪೋಷಕರು ಆತನನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ವೈದ್ಯರು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು.
ಡಿಸೆಂಬರ್ 25ರ ರಾತ್ರಿ ಆ್ಯಂಬುಲೆನ್ಸ್ ಮೂಲಕ ಅವರನ್ನು ಮಡಿಕೇರಿಯಿಂದ ಬೆಂಗಳೂರಿನತ್ತ ಕರೆದೊಯ್ಯಲಾಗಿತ್ತು. ಆದರೆ ಆ್ಯಂಬುಲೆನ್ಸ್ ಚಾಲಕ ಮಧ್ಯೆ ಮಧ್ಯೆ ಆ್ಯಂಬುಲೆನ್ಸ್ ನಿಲ್ಲಿಸುತ್ತಿದ್ದ. ಹುಣಸೂರು ಬಳಿ ಇನ್ನು ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲ ಎಂದು ಚಾಲಕ ಆ್ಯಂಬುಲೆನ್ಸ್ ಅನ್ನು ನಿಲ್ಲಿಸಿಬಿಟ್ಟಿದ್ದ. ತಕ್ಷಣ ಸ್ಥಳೀಯರು ರೋಗಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿದ್ದರು. ರೋಗಿಯನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತೀರ್ಥಾನಂದ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಈಗಾಗಲೇ ಆ್ಯಂಬುಲೆನ್ಸ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.