ಉಡುಪಿ: ಹಿಜಾಬ್ ಹಾಕಿ ಬರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವ ಘಟನೆ ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ಪರಿಣಾಮವಾಗಿ ಈ ವಿದ್ಯಾರ್ಥಿನಿಯರು ಮೂರು ನಾಲ್ಕು ದಿನಗಳಿಂದ ತರಗತಿಯ ಹೊರಗೇ ನಿಲ್ಲುವಂತಾಗಿದೆ.
ಕಾಲೇಜು ಪ್ರಾಂಶುಪಾಲರಾದ ರುದ್ರೆಗೌಡ ಅವರು, ನಮ್ಮಲ್ಲಿ ಈವರೆಗೆ ಹಿಜಾಬ್ ಹಾಕಿಕೊಂಡು ತರಗತಿಗೆ ಹಾಜರಾಗುವ ನಿಯಮ ಇರಲಿಲ್ಲ. ಕಳೆದ ಮೂರು ದಿನಗಳಿಂದ ಸುಮಾರು 60 ಮುಸ್ಲಿಮ್ ವಿದ್ಯಾರ್ಥಿನಿಯರಲ್ಲಿ ಕೆಲವು ಮಂದಿ ಮಾತ್ರ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಇವರ ಮನೆಯವರನ್ನು ಕರೆದು ಮಾತುಕತೆ ಮಾಡಿದ್ದೇವೆ. ಅವರೆಲ್ಲ ಅರ್ಥ ಮಾಡಿಕೊಂಡು ಒಪ್ಪಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ:
ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಪ್ರಕರಣದಲ್ಲಿ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ತೆಗೆದುಕೊಳ್ಳದಿದ್ದರೆ ಕಾಲೇಜ್ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮಸೂದ್ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ಹಿಜಾಬ್ ಧರಿಸಿದ ಮಕ್ಕಳನ್ನು ಕ್ಲಾಸಿಗೆ ಸೇರಿಸದಿದ್ದರೆ ನಾವು ಮಕ್ಕಳು ಹಾಗೂ ಪೋಷಕರನ್ನು ಕರೆದು ಡಿಡಿಪಿಯು-ಎಡಿಸಿ ಬಳಿ ತೆರಳುತ್ತೇವೆ. ಇಲ್ಲಿ ಬೇರೆ ಧರ್ಮದ ಪೂಜೆ, ಆಚರಣೆ ಆಗುತ್ತದೆ. ಅದಕ್ಕೆ ಯಾವುದೇ ಧಕ್ಕೆ ಇಲ್ಲ. ಆದರೆ ಮುಸ್ಲಿಂ ಹುಡುಗಿಯರ ಹಿಜಾಬ್ ಹಾಕಿದ ಮಾತ್ರಕ್ಕೆ ಪ್ರವೇಶವಿಲ್ಲವೇ? ಇದನ್ನು ಕ್ಯಾಂಪಸ್ ಫ್ರಂಟ್ ಕರ್ನಾಟಕ ವಿರೋಧಿಸುತ್ತದೆ.
ಇವರಿಗೆ ನ್ಯಾಯಕೊಡದಿದ್ದಲ್ಲಿ, ಈ ಹಿಂದೆ ಮಂಗಳೂರು ಹಾಗೂ ಪುತ್ತೂರಿನ ಖಾಸಗಿ ಕಾಲೇಜನ್ನು ಬಂದ್ ಮಾಡಿ ಪ್ರತಿಭಟಿಸಿದ್ದೇವೆ. ಮಿಸ್ಟರ್ ಪ್ರಿನ್ಸಿಪಲ್‌ಗೆ ನಾನು ಹೇಳುವುದೇನೆಂದರೆ ಈ ವಿದ್ಯಾರ್ಥಿನಿಯರನ್ನು ಕ್ಲಾಸಿಗೆ ತೆಗೆದುಕೊಳ್ಳದಿದ್ದರೆ ಈ ಕಾಲೇಜನ್ನು ಬಂದ್ ಮಾಡಿ ಜಿಲ್ಲೆಯ ವಿದ್ಯಾರ್ಥಿನಿಯರನ್ನು ಸೇರಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆ ನೀಡುತ್ತೇವೆ ಎಂದರು.