ಬೆಂಗಳೂರು: ಹಿರಿಯ ಸಾಹಿತಿ, ನಾಟಕಕಾರ, ಪತ್ರಿಕಾ ಸಂಪಾದಕ, ಕಸಾಪ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ್(83) ವಿಧಿವಶರಾಗಿದ್ದಾರೆ. ಚಂಪಾ ಎಂದೇ ಪರಿಚಿತರಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲ್, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಮುಂಜಾನೆ 6.30ರ ಸುಮಾರಿಗೆ ಬೆಂಗಳೂರಿನ ಕೋಣನಕುಂಟೆ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಚಂದ್ರಶೇಖರ ಪಾಟೀಲ್, ಕನ್ನಡ ನಾಡು-ನುಡಿ, ಸಂಸ್ಕೃತಿ ರಕ್ಷಣೆಗೆ ಹೋರಾಡಿದ್ದರು. ಹಲವು ಪ್ರಶಸ್ತಿಗೆ ಭಾಜನರಾಗಿದ್ದರು. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, 2018ನೇ ಸಾಲಿನಲ್ಲಿ ಬಸವಶ್ರೀ ಪ್ರಶಸ್ತಿ ಲಭಿಸಿದೆ. ಇವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ, ಬೇಂದ್ರೆ-ನಾ ಕಂಡಂತೆ, ನನಗೆ ಕಂಡಷ್ಟು, ೨೬ ದಿನ ೨೫ ರಾತ್ರಿ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ‘ಸಂಕ್ರಮಣ’ ಪತ್ರಿಕೆಯ ಮೂಲಕ ಸಾಹಿತ್ಯ ಚರ್ಚೆಗೆ ಹೊಸ ದಿಕ್ಕು ತೋರಿದವರು ಚಂಪಾ. ದಲಿತ,ಬಂಡಾಯ ಸಾಹಿತ್ಯದ ಯುವ ಬರಹಗಾರರಿಗೆ ಸಂಕ್ರಮಣ ವೇದಿಕೆಯಾಗಿತ್ತು.
ಸಾಹಿತಿ ಚಂದ್ರಶೇಖರ ಪಾಟೀಲ್ ನಿಧನಕ್ಕೆ ಸಿಎಂ ಸಂತಾಪ
ಚಂಪಾ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ನಷ್ಟವಾಗಿದೆ. ಈ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬದವರು, ಅಭಿಮಾನಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುವೆ. ಕನ್ನಡಕ್ಕಾಗಿ ನಡೆದ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದ್ರು. ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ ಪ್ರೊ.ಚಂಪಾ ಅವರ ನಿಧನದ ವಿಷಯದಿಂದ ತುಂಬಾ ದುಃಖಿತನಾಗಿದ್ದೇನೆ ಎಂದು ಸಾಹಿತಿ ಚಂಪಾ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
https://twitter.com/BSBommai/status/1480381138656903170?
ಚಂಪಾ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ
ಚಂಪಾ ನಿಧನದಿಂದ ದುಃಖಿತನಾಗಿದ್ದೇನೆಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಅನ್ಯಾಯ, ಅಸಮಾನತೆ, ಸರ್ವಾಧಿಕಾರದ ವಿರುದ್ಧ ಸಿಡಿಯುತ್ತಲೇ ಇದ್ದ ಹುಟ್ಟು ಬಂಡಾಯಗಾರ, ವೈಚಾರಿಕ ಗುರು, ನನ್ನ ದೀರ್ಘ ಕಾಲದ ಸ್ನೇಹಿತರಾಗಿದ್ದ ಪ್ರೊ.ಚಂದ್ರಶೇಖರ ಪಾಟೀಲ್ ನಿಧನದಿಂದ ದುಃಖಿತನಾಗಿದ್ದೇನೆ. ಇವರ ಕುಟುಂಬ ಹಾಗೂ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಚಂದ್ರಶೇಖರ ಪಾಟೀಲ್ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
https://twitter.com/siddaramaiah/status/1480377000816635911?
ಚಂಪಾ ಅಗಲಿಕೆ ನಾಡಿಗೆ ದೊಡ್ಡ ನಷ್ಟ -ಹೆಚ್ಡಿಕೆ
ಕನ್ನಡಪರ ಹೋರಾಟಗಾರ, ಕವಿ, ನಾಟಕಕಾರ, ಸಂಘಟನಕಾರ, ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ರಾಂತ ಅಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರ ಪಾಟೀಲ ಅವರ ನಿಧನ ಬಹಳ ದುಃಖ ಉಂಟು ಮಾಡಿದೆ. ಚಂಪಾ ಎಂದೇ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ ಅವರು ಸಾಹಿತ್ಯ ಕೃಷಿಯ ಜತೆಗೆ ನಾಡು, ನುಡಿ, ನೆಲಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರು. ಚಂಪಾ ಅವರ ಅಗಲಿಕೆ ನಾಡಿಗೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಹೆಚ್ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
https://twitter.com/hd_kumaraswamy/status/1480381121728684036?
ಸಾಹಿತಿ ಚಂಪಾ ನಿಧನಕ್ಕೆ ಡಾ.ಮಹೇಶ್ ಜೋಶಿ ಸಂತಾಪ
ಸಾಹಿತಿ ಚಂಪಾ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮನು ಬಳಿಗಾರ್ ಸಂತಾಪ ಸೂಚಿಸಿದ್ದಾರೆ. ಚಂಪಾ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ಡಾ.ಮಹೇಶ್ ಜೋಶಿ ಸಂತಾಪ ವ್ಯಕ್ತಪಡಿಸಿದ್ದಾರೆ.