ಮಡಿಕೇರಿ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ ಪ್ರಶಸ್ತಿ ಪ್ರದಾನ ಮತ್ತು ಪುರಸ್ಕಾರ ಸಮಾರಂಭವು ಜನವರಿ ಹತ್ತರಂದು ಮಡಿಕೇರಿಯ ಕಾವೇರಿ ಹಾಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬ್ಯಾರಿ ಕಲಾರಂಗದಲ್ಲಿ ಅಪ್ರತಿಮ ಸೇವೆಗೈದ ಯುವಪ್ರತಿಭೆ, ಬ್ಯಾರಿ ಭಾಷೆಯ ಬೆಳವಣಿಗೆಗಾಗಿ ತನ್ನದೇ ರೀತಿಯಲ್ಲಿ ಸೇವೆಗೈದ ಬ್ಯಾರಿ ಝುಲ್ಪಿಯವರಿಗೆ ಗೌರವ ಪುರಸ್ಕಾರ ನೀಡಲಾಯಿತು.
ಬ್ಯಾರಿ ಭಾಷೆಯಲ್ಲಿ ಪ್ರಥಮ ಬಾರಿಗೆ “ಬ್ಯಾರಿ ಬಾಸ್” ಎಂಬ ರಿಯಾಲಿಟಿ ಶೋ ಕಾರ್ಯಕ್ರಮ ಜೊತೆಗೆ “ಕೊರಿಯ ನೇರ್ ಕೊರಿಯ ಕಲವ್” ಸೇರಿದಂತೆ ಹಲವಾರು ಕಾಮಿಡಿ ಕಾರ್ಯಕ್ರಮಗಳನ್ನು ಸಂಯೋಜಿಸಿದ ಕೀರ್ತಿ ಇವರದ್ದಾಗಿದೆ. ಇವರ ಸೇವೆಯನ್ನು ಪರಿಗಣಿಸಿ 2021ರ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
2021ನೇ ಸಾಲಿನ ಗೌರವ ಪ್ರಶಸ್ತಿಯನ್ನು ಹರೇಕಳ ಹಾಜಬ್ಬ, ಹುಸೇನ್ ಕಾಟಿಪಳ್ಳ ಹಾಗೂ ಡಾ.ಸಿದ್ದೀಕ್ ಅಡ್ಡೂರು ಅವರಿಗೆ ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಹಲವಾರು ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.