ಬೆಳಗಾವಿ: ವ್ಯಾಕ್ಸಿನ್ ಪಡೆದ ಬಳಿಕ ಮೂವರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೃತ ಮೂವರೂ ಮಕ್ಕಳಿಗೆ ರುಬೆಲ್ಲಾ ಚುಚ್ಚುಮದ್ದು (Rubella Vaccination) ನೀಡಲಾಗಿತ್ತು. ರುಬೆಲ್ಲಾ ವ್ಯಾಕ್ಸಿನ್ ಪಡೆದ ಬಳಿಕ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಮೊನ್ನೆ ಒಂದು ಮಗು, ಇಂದು ಇಬ್ಬರು ಮಕ್ಕಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ 13 ತಿಂಗಳು ಪವಿತ್ರಾ ಹುಲಗೂರ್, 14 ತಿಂಗಳ ಮಧು ಉಮೇಶ್ ಕುರಗುಂದಿ ಹಾಗೂ ಮಲ್ಲಾಪುರ ಗ್ರಾಮದ ಒಂದೂವರೆ ವರ್ಷದ ಚೇತನ ಎಂಬ ಮಗ ಮೃತಪಟ್ಟಿದೆ. ಕಡಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಗಮಿಸಿದ್ದ ಸಿಬ್ಬಂದಿ ಈ ಮಕ್ಕಳಿಗೆ ಇಂಜೆಕ್ಷನ್ ನೀಡಿದ್ದರು. ಆ ಬಳಿಕ ಮಕ್ಕಳಲ್ಲಿ ವಾಂತಿ-ಭೇದಿ ಆರಂಭವಾಗಿತ್ತು ಎಂದು ಹೇಳಲಾಗುತ್ತಿದೆ. ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜನವರಿ 13 ರಂದು ಒಂದು ಮಗು, ಇಂದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಆರೋಗ್ಯ ಸಚಿವರ ಪ್ರತಿಕ್ರಿಯೆ:
ಬೆಳಗಾವಿಯ ರಾಮದುರ್ಗ ತಾಲೂಕಿನ ಮೂವರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ. ಸುಧಾಕರ್ , ರುಬೆಲ್ಲಾ ವ್ಯಾಕ್ಸಿನ್ ಪಡೆದ ಬಳಿಕ ಸಾವು ಆರೋಪ ಕೇಳಿ ಬಂದಿದೆ. ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಏನಾಗಿದೆ ಅಂತ ನೋಡಿಕೊಂಡು ಮಾತಾಡ್ತೇನೆ ಎಂದರು. ಮರಣೋತ್ತರ ಪರೀಕ್ಷೆ ಬಳಿಕ ಮಕ್ಕಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ಮಗುವಿನ ಸಾವಿಗೆ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಸಹ ಕೇಳಿಬರುತ್ತಿದೆ. ಈ ಹಿನ್ನೆಲೆ ಮಕ್ಕಳ ಸಾವಿನ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಒತ್ತಾಯ ಮಾಡುತ್ತಿದ್ದಾರೆ.
ಪ್ರಸ್ತುತ ರಾಮದುರ್ಗದಲ್ಲಿ ಮೃತ 14 ತಿಂಗಳ ಮಗು ಮಧು ಮರಣೋತ್ತರ ಪರೀಕ್ಷೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮುಗಿದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.