ಮಂಗಳೂರು: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ಅನ್ಯ ಧರ್ಮದ ಮದುವೆ ಮನೆಯಲ್ಲಿ ವರ ಹಿಂದೂಗಳ ಆರಾಧ್ಯ ದೈವ ಸ್ವಾಮೀ ಕೊರಗಜ್ಜನ ವೇಷವನ್ನು ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಇಬ್ಬರು ಆರೋಪಿಗಳಿಗೆ ಬಂಟ್ವಾಳ ಎ.ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ನ್ಯಾಯವಾದಿ ಶ್ರೀಕಾಂತ್ ಭಟ್ ವಾದ ಮಂಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಲ್ಪಡಿ ನಿವಾಸಿ, ಪುತ್ತೂರು ಫಾತಿಮಾ ಅಂಗಡಿಯ ಮಾಲಕ ಅಹ್ಮದ್ ಮುಜಿತಾಬು (28) ಮತ್ತು ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್ (19) ಎಂಬಿಬ್ಬರು ಆರೋಪಿಗಳನ್ನು ಇತ್ತೀಚಿಗೆ ಪೊಲೀಸರು ಬಂಧಿಸಿದ್ದರು.
ಬಂಧಿತ ಆರೋಪಿಗಳನ್ನು ಪೊಲೀಸರು ಅದೇ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿತ್ತು.
ಈ ಪ್ರಕರಣ ಕರಾವಳಿ ಜಿಲ್ಲೆಯಲ್ಲಿ ತೀವ್ರ ವಿವಾದವನ್ನು ಉಂಟು ಮಾಡಿತ್ತು. ಆರೋಪಿಗಳ ಪರ ನ್ಯಾಯವಾದಿ ಶ್ರೀಕಾಂತ್ ಭಟ್ ವಾದ ಮಂಡಿಸಿದ್ದು ಬಂಟ್ವಾಳ ನ್ಯಾಯಾಲಯ ಆರೋಪಿಗಳಿಗೆ ಸೋಮವಾರ ಜಾಮೀನು ನೀಡಿದೆ.