ಕೋಟ: ಇಲ್ಲಿನ ಕೋಟತಟ್ಟುವಿನ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ಕೆಲವರ ಮೇಲಿನ ಪ್ರಕರಣ ಹಿಂಪಡೆಯುವುದಾಗಿ ಕಾಲೊನಿಗೆ ಭೇಟಿ ನೀಡಿದ್ದ ಗೃಹ ಸಚಿವರ ಭರವಸೆ ಅವರ ಹಿಂದೆಯೇ ಹೋಗಿದೆ. ಅದರ ಜತೆ ಮೂಲ ಸೌಲಭ್ಯ ಕಲ್ಪಿಸುವ ಭರವಸೆಯೂ ಸುಳ್ಳಾಗಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಹಿಂದೆ ಪ್ರಕರಣ ನಡೆದ ಸಂದರ್ಭ ಕೊರಗ ಕಾಲೋನಿಗೆ ಭೇಟಿ ನೀಡಿ 15 ದಿನದಲ್ಲಿ ಕೇಸ್ ಹಿಂಪಡೆಯುವ ಹೇಳಿಕೆ ನೀಡಿದ್ದರು.
ಇದೀಗ ಗಡುವು ಮುಗಿದಿದೆ. ಇದೀಗ ನ್ಯಾಯ ಸಿಗುವ ತನಕ ನಿರಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವ ನಿರ್ಧಾರಕ್ಕೆ ಸಮುದಾಯದ ಮುಖಂಡರು ಬಂದಿದ್ದಾರೆ.
ಇದೀಗ ಸರಕಾರಕ್ಕೆ ಹದಿನೈದು ದಿನ ಕಾಲಾವಕಾಶ ನೀಡಿ, ಕೇಸ್ ಹಿಂಪಡೆಯದಿದ್ದರೆ ತೀವ್ರ ರೀತಿ ಹೋರಾಟ ನಡೆಸಲು ಕೊರಗ ಸಮಾಜದ ಮುಖಂಡರು ಕೋಟತಟ್ಟು ಕಾಲನಿಯಲ್ಲಿ ನಡೆಸಿದ ಸಭೆಯಲ್ಲಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.