ಪುತ್ತೂರು: ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕದ್ದೊಯ್ದ ಘಟನೆ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮೋಹನ್ ಕುಮಾರ್ ಎಂಬವರು ತಮ್ಮ ತೋಟದಲ್ಲಿ ಆದ ಅಡಿಕೆಯನ್ನು ಎಂದಿನಂತೆ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದರು.
ಜ.28 ರಂದು ರಾತ್ರಿ 12.00 ಗಂಟೆಯ ಸಮಯಕ್ಕೆ ಮೋಹನ್ ಕುಮಾರ್ ಸಂಬಂಧಿ ದೀಕ್ಷಿತ್ ಎಂಬವರು ಫ್ಲೆಕ್ಸ್ ಅಳವಡಿಕೆಯ ಕೆಲಸ ಮುಗಿಸಿ ಮನೆಕಡೆ ಬರುತ್ತಿದ್ದಾಗ ಮೋಹನ್ ಕುಮಾರ್ ಮನೆಯ ಗೇಟಿನ ಪಕ್ಕ ನಿಂತಿದ್ದ ಮೋಟಾರ್ ಸೈಕಲ್ ಕಂಡು ಅನುಮಾನಗೊಂಡು ಅಂಗಳದ ಬಳಿ ಹೋದಾಗ ಮೂರು ಜನ ವ್ಯಕ್ತಿಗಳು ಗೋಣಿಚೀಲದಲ್ಲಿ ಅಡಿಕೆಯನ್ನು ಕಳವು ಮಾಡುತ್ತಿದ್ದರು.
ತಕ್ಷಣ ದೀಕ್ಷಿತ್ ನನ್ನು ಕಂಡು ಮೂವರು ಅಂಗಳದಲ್ಲಿ ಅರೆ ಬರೆ ತುಂಬಿಸಿದ ಅಡಿಕೆ ಚೀಲವನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಸಮಯ ಒಬ್ಬನು ಹೊತ್ತುಕೊಂಡಿದ್ದ ಒಂದು ಚೀಲ ಅಡಿಕೆಯನ್ನು ದಾರಿ ಮಧ್ಯೆ ಎಸೆದು ಓಡಿ ಹೋಗಿರುತ್ತಾನೆ.
ಮರುದಿನ ಅಂದರೆ ಜ. 29 ರಂದು ಬೆಳಿಗ್ಗೆ ಸಮಾರು 8.00 ಗಂಟೆಗೆ ಹಿಂದಿನ ರಾತ್ರಿ ಎಸೆದು ಹೋದ ಅಡಿಕೆ ಚೀಲವನ್ನು ತೆಗೆದುಕೊಂಡು ಹೋಗಲು ಬಂದಿದ್ದಾನೆ. ತಕ್ಷಣ ಆತನನ್ನು ಹಿಡಿದು ವಿಚಾರಿಸಿದಾಗ ಸಚಿನ್ ಎಂದು ಗುರುತಿಸಲಾಗಿದೆ.
ಆತ ಕಡೇಶಿವಾಲಯ ನಿವಾಸಿ ಎಂದು ತಿಳಿದುಬಂದಿದೆ. ಕಳವಾದ ಅಡಿಕೆಯ ಮೌಲ್ಯ 2000ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.