ಕಡಬ: ಸ್ವಂತ ತಂಗಿಯ ಮಗಳಿಗೆ ನಿರಂತರ ಕಿರುಕುಳ ಹಾಗೂ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಮಾವನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣೆಯಲ್ಲಿ ಪೊಕ್ಸೊ ಪ್ರಕರಣ ಸೇರಿದಂತೆ ಇತರ ಪ್ರಕರಣಗಳು ದಾಖಲಾಗಿದೆ.
ಜಾನ್ ಬಂಧಿತ ಆರೋಪಿ. ವೃದ್ಧ ಅಜ್ಜಿಯ ಜೊತೆಯಲ್ಲಿ ವಾಸವಾಗಿರುವ ತಾಯಿ ಕಳೆದುಕೊಂಡ ಅಪ್ರಾಪ್ತ ಬಾಲಕಿ ತನ್ನ ತೋಟದಲ್ಲಿ ನೀರು ಹಾಯಿಸುತಿರುವ ಸ್ಪಿಂಕ್ಲರ್ ಸೆಟ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಸ್ವಂತ ಮಾವ ಜಾನ್ ಎಂಬಾತನು ಬಂದು ಬಾಲಕಿಯ ಮಾನಭಂಗಕ್ಕೆ ಯತ್ನಿಸಿ, ಹಲ್ಲೆ ನಡೆಸಿರುವ ಬಗ್ಗೆ ದೂರಿನಲ್ಲಿ ವಿವರಿಸಲಾಗಿದೆ.
ಮಾವನ ಈ ನೀಚ ಕೃತ್ಯಕ್ಕೆ ಹೆದರಿದ ಬಾಲಕಿಯು ಕಿರುಚಿದ್ದು, ಈ ವೇಳೆ ಆಕೆಯ ಅಜ್ಜಿ ಧಾವಿಸಿ ಬಂದಿದ್ದಾರೆ. ಈ ವೇಳೆ ತೋಟಕ್ಕೆ ಬಂದಿದ್ದ ಸಂತ್ರಸ್ತ ಯುವತಿಯ ಅಜ್ಜಿಗೂ ಆರೋಪಿ ಜಾನ್ ಕೈಯಿಂದ ಗುದ್ದಿ, ತಲೆಗೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ವೇಳೆ ಸ್ಥಳೀಯ ನೆರೆಕರೆಯ ಸಂಬಂಧಿಕ ಮಂದಿ ಘಟನಾ ಸ್ಥಳಕ್ಕೆ ಬಂದಿದ್ದು, ಆರೋಪಿಯ ಪತ್ನಿ ಶಿಕ್ಷಕಿಯಾಗಿರುವ ಜೆನ್ಸಿ ಎಂಬಾಕೆಯು ಬಾಲಕಿಗೆ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಸಂತ್ರಸ್ತ ಯುವತಿಯು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆಕೆಯು ನೀಡಿದ ದೂರಿನಂತೆ ಕಡಬ ಪೊಲೀಸರು ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.