ಮಂಗಳೂರು: ಎರಡು ದಿನಗಳ ಹಿಂದೆ ಬಾರೊಂದರಲ್ಲಿ ಕುಡಿದು ಕ್ಷುಲಕ ಕಾರಣಕ್ಕೆ ಜಗಳ ಮಾಡಿಕೊಂಡು ಚೂರಿ ಇರಿತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಮತ್ತೆ ಹುಡುಕಾಟದಲ್ಲಿದ್ದಾರೆ.

ಪಡಂತರಬೆಟ್ಟು ನಿವಾಸಿ ಪುರುಷ ಯಾನೆ ಪುರುಷೋತ್ತಮ ಹಾಗೂ ಬಿ.ಕಸಬಾ ನಿವಾಸಿ ಧನುಷ್ ಯಾನೆ ಧನಂಜಯ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.
ಘಟನೆಯ ವಿವರ: ಸ್ನೇಹಿತರು ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಿಕೊಂಡ ಬಳಿಕ ಚೂರಿ ಇರಿದಿದ್ದು, ಇರಿತದಿಂದ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿ ಫೆ. 9ರಂದು ನಡೆದಿತ್ತು.ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಮಧ್ಯೆ ಜಗಳ ನಡೆದಿದೆ.
ಈ ವೇಳೆ ಚೂರಿಯಿಂದ ಇರಿದಿದ್ದು ಪರಿಣಾಮ ಕಿಶೋರ್ ಹಾಗೂ ದಯಾನಂದ್ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಪ್ರಕರಣದ ಆರೋಪಿಗಳಾದ ಅರ್ಬಿಗುಡ್ಡೆ ನಿವಾಸಿಗಳಾದ ಸುಚಿತ್, ಸಚಿನ್, ಧನು ಹಾಗೂ ಪುರುಷ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅವರ ಪತ್ತೆಗಾಗಿ ಎಸ್.ಪಿ.ಋಷಿಕೇಶ್ ಸೋನಾವಣೆ ನಿರ್ದೇಶನ ದಂತೆ ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನ ದಲ್ಲಿ ಬಂಟ್ವಾಳ ನಗರ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ನೇತೃತ್ವದ ತಂಡ ರಚನೆ ಮಾಡಿದ್ದರು.
ನಿನ್ನೆ ನಗರ ಠಾಣಾ ಪೋಲೀಸ್ ಇನ್ಸ್ಪೆಕ್ಟರ್ ವಿವೇಕಾನಂದ ನೇತೃತ್ವದ ಎಸ್.ಐ.ಅವಿನಾಶ್ ಅವರ ತಂಡ ಆರೋಪಿಗಳಿಬ್ಬರನ್ನು ಬಂಧಿಸಿದ್ದು ಉಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.