ಉಪ್ಪಿನಂಗಡಿ: ತೆಕ್ಕಾರು ಗ್ರಾಮ ಪಂಚಾಯತ್ ಕಛೇರಿಗೆಂದು ನಿರ್ಮಾಣವಾಗುತ್ತಿದ್ದ ಕಟ್ಟಡದಲ್ಲಿ ಇದೀಗ ತೆಕ್ಕಾರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯೆ ಯಮುನಾ ರವರು ಹಾಲು ಕುದಿಸಿ ಗೃಹ ಪ್ರವೇಶ ನಡೆಸಿದ್ದು ಹೊಸ ಕುತೂಹಲಕ್ಕೆ ಕಾರಣವಾಗಿದೆ.
ತೆಕ್ಕಾರು ಗ್ರಾಮ ಪಂಚಾಯತ್ ಸ್ವತಃ ಕಚೇರಿಗೆ ಕಟ್ಟಡ ನಿರ್ಮಾಣ ಕಾರ್ಯ ನಿರ್ವಹಿಸುತ್ತಿದ್ದು ಸುಮಾರು 40ಲಕ್ಷ ರೂ ವೆಚ್ಚದ ಎರಡು ಅಂತಸ್ತಿನ ಕಾರ್ಯ ಇದೀಗಾಗಲೇ ಭರದಿಂದ ಸಾಗಿದ್ದು ಇದೀಗ ಅದೇ ಪಂಚಾಯತ್ ಸದಸ್ಯೆ ಯಮುನಾ ರವರು ಇದು ನನಗೆ ಒಳಪಟ್ಟ ಜಾಗವೆಂದು ಹೇಳಿ ಅದೇ ಕಟ್ಟಡದ ಸುತ್ತ ಬೇಲಿ ನಿರ್ಮಿಸಿ ಪಂಚಾಯತ್ ನೂತನ ಕಟ್ಟಡ ಪ್ರವೇಶಿಸಿ ವಾಸ್ತವ್ಯ ಹೂಡಿದ ಘಟನೆ ತೆಕ್ಕಾರುನಲ್ಲಿ ನಡೆದಿದೆ.
ತನಗೆ ಸೇರಿದ ಜಾಗದಲ್ಲಿ ಪಂಚಾಯತ್ ಬಲವಂತವಾಗಿ ಬಹುಮಡಿ ಕಟ್ಟಡ ನಿರ್ಮಿಸುತ್ತಿದೆ ಎಂದು ಆರೋಪಿಸಿ ಪರಿಶಿಷ್ಟ ಜಾತಿಗೆ ಸೇರಿದ ತೆಕ್ಕಾರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯೆ ಯಮುನಾ ರವರು ಈ ಬಗ್ಗೆ ಕೋರ್ಟ್ ಮೊರೆ ಹೋಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮ, ಬಾರ್ಯ ಪಂಚಾಯತ್ ನಿಂದ ಬೇರ್ಪಟ್ಟು ಹೊಸ ಗ್ರಾಮವಾಗಿದ್ದು ಪ್ರಸ್ತುತ ಗ್ರಾಮಕ್ಕೆ ಸ್ವತಃ ಕಚೇರಿಗೆ ಹಲವಾರು ದಶಕಗಳಿಂದ ಬಾಜಾರು ಅಂಗನವಾಡಿ ಸಮೀಪವಿರುವ ಹಳೆಯ ಸರ್ಕಾರಿ ಕಟ್ಟಡವನ್ನು ತೆರವುಗೊಳಿಸಿ ಪಂಚಾಯತ್ ಕಚೇರಿಗೆ ಸ್ಥಳ ನಿಗದಿಪಡಿಸಿ ಕಟ್ಟಡ ನಿರ್ಮಾಣ ಕಾರ್ಯವು ಬಲು ವೇಗದಿಂದ ಸಾಗುತ್ತಿದ್ದು ಇದೀಗ 40 ಲಕ್ಷ ವೆಚ್ಚದಲ್ಲಿ ಎರಡು ಅಂತಸ್ತಿನ ಕೆಲಸವು ನಡೆಯುತ್ತಿದ್ದು ಇದೀಗ ಏಕಾ-ಏಕಿ ಪಂಚಾಯತ್ ಸದಸ್ಯೆ ಯಮುನಾ ರವರು ಇದು ನನ್ನ ಜಾಗ ನನ್ನ ಆಸ್ತಿಯ 103/1 ಎ2 ರಲ್ಲಿಯ 0.69 ಎಕ್ರೆ ಜಾಗವನ್ನು ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆರು ತಿಂಗಳ ಹಿಂದೆ ಅಕ್ರಮವಾಗಿ ಪ್ರವೇಶಿಸಿ ಜೆ.ಸಿ ಬಿ ಮುಕಾಂತರ ನನ್ನ ಕೃಷಿಗಳನ್ನು ನಾಶ ಪಡಿಸಿ ಕಟ್ಟಡ ನಿರ್ಮಾಣ ಕಾರ್ಯವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದ ನನಗೆ ಜಾತಿಯ ಕಾರಣದಿಂದ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
ಇದೀಗ ಕೋರ್ಟ್ ಈ ಬಗ್ಗೆ ಪಂಚಾಯತ್ ಸೂಕ್ತ ದಾಖಲೆಗಳನ್ನು ಬೆಳ್ತಂಗಡಿ ತಾಲೂಕು ದಂಡಾಧಿಕಾರಿ ಮುಂದೆ ಹಾಜರು ಪಡಿಸುವಂತೆ ಸೂಚಿಸಿದೆ.
ಯಮುನಾ ರವರು ಇದು ನಾನು 40 ವರ್ಷಗಳಿಂದ ಸ್ವಾಧೀನ ಹೊಂದಿದ ಭೂಮಿಯಾಗಿದೆ ಎಂದು ಸಂಬಂಧಿತ ದಾಖಲೆಗಳೊಂದಿಗೆ ಪುತ್ತೂರು ಸಹಾಯಕ ಕಮಿಷನರ್ ನ್ಯಾಯಾಲಯದಲ್ಲಿ ಮಹಿಳೆ ದಾವೆ ಹೂಡಿದ್ದಾರೆ.
ಈ ಬಗ್ಗೆ ಕೋರ್ಟ್ ಪಂಚಾಯತ್ ಸೂಕ್ತ ದಾಖಲೆಗಳನ್ನು ಹಾಜರಿ ಪಡಿಸುವವರೆಗೂ ಯತಾಸ್ಥಿತಿ ಕಾಪಾಡುವಂತೆ ಕೋಟ್ ಮಧ್ಯಾಂತರ ಆದೇಶ ಹೊರಡಿಸಿದೆ.
ಇನ್ನು ಸರ್ಕಾರಿ ಸರ್ವೇ ನಡೆಸುವಂತೆ ಎರಡು ತಂಡಗಳ ವಿಚಾರಣೆ ವೇಳೆ ಪೊಲೀಸ್ ಉಪ ಅಧೀಕ್ಷಕಿ ಗಾನ.ಪಿ ಕುಮಾರ್ ಸೂಚಿಸಿದ್ದಾರೆ.
ಇದೇ ವೇಳೆ ಯಮುನಾರವರು ಅದೇ ಕಟ್ಟಡಕ್ಕೆ ಯಮುನಾ ನಿವಾಸ ಎಂದು ನಾಮಕರಣ ಮಾಡಿದ್ದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಒಂದು ಘಟನೆಯೂ ಸಾರ್ವಜನಿಕರನ್ನು ಕುತೂಹಲ ಕೆರಳಿಸಿದೆ.ಇಷ್ಟು ದೊಡ್ಡ ಮಟ್ಟಿನ ಕಟ್ಟಡ ನಿರ್ಮಿಸುವಾಗ ಪಂಚಾಯತ್ ಗೆ ಸೂಕ್ತ ದಾಖಲೆ ಇರಲಿಲ್ಲವೇ?
ಮತ್ತು ಯಮುನಾ ರವರು ಇಷ್ಟು ದೊಡ್ಡ ಕಟ್ಟಡ ನಿರ್ಮಾಣ ಪೂರ್ಣ ಹಂತಕ್ಕೆ ತಲುಪುತ್ತಿರುವ ತನಕ ಸುಮ್ಮನೆ ಕೂತದ್ದಾದರು ಏಕೆ ಎಂಬ ಸಂಶಯ ಸಾರ್ವಜನಿಕರದ್ದು.
ಏನೇ ಆದರೂ ತೆಕ್ಕಾರಿನ ಜನತೆಯ ಹಲವಾರು ವರ್ಷಗಳ ಗ್ರಾಮ ಪಂಚಾಯತ್ ನ ನೂತನ ಕಚೇರಿಯ ಕನಸು ನೆರವೇರಲಿ ಎಂಬ ಹಾರೈಕೆ ಸಾರ್ವಜನಿಕರದ್ದಾಗಿದೆ.