ಬೆಂಗಳೂರು: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಕೊಲೆಗೈದು ಬಳಿಕ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗೋವಿಂದಪುರದ ಭೈರಪ್ಪ ಲೇಔಟ್ ನಿವಾಸಿ ಆಯಿಷಾ ಬಾನು(31) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆಕೆಯ ಪತಿ ಮುಜಾಮಿಲ್ ಪಾಷಾ(38) ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಆಟೋ ಚಾಲಕನಾಗಿರುವ ಮುಜಾಮಿಲ್ ಪಾಷಾ,12 ವರ್ಷಗಳ ಹಿಂದೆ ಆಯಿಷಾ ಬಾನು ಅವರನ್ನು ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಕುಟುಂಬ ಸಮೇತ ಭೈರಪ್ಪ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಈ ಮಧ್ಯೆ ಆಯಿಷಾ ಬಾನು ಪರಪುರುಷನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ವಿಚಾರ ತಿಳಿದ ಪಾಷಾ, ಪತ್ನಿಗೆ ಸಾಕಷ್ಟು ಬಾರಿ ಬುದ್ದಿ ಹೇಳಿದ್ದ.
ಅದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಹಿರಿಯರು ಕೂಡ ಐದಾರು ಬಾರಿ ಇಬ್ಬರ ನಡುವೆ ರಾಜಿಸಂಧಾನ ನಡೆಸಿದ್ದಾರೆ.ಆದರೂ ಆಕೆ ಸರಿ ಹೋಗಿರಲಿಲ್ಲ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಅಲ್ಲದೆ, ಪತಿ ಮುಜಾಮಿಲ್ ಪಾಷಾನನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ. ಅದರಿಂದ ಆಕ್ರೋಶಗೊಂಡ ಪಾಷಾ, ತಡರಾತ್ರಿ 12.30ರ ಸುಮಾರಿಗೆ ಪತ್ನಿ ಜಗೆ ಜಗಳ ಮಾಡಿದ್ದಾನೆ. ಈ ವೇಳೆ ಕೋಪಗೊಂಡ ಆರೋಪಿ ಕುಡುಗೋಲಿನಿಂದ ಆಕೆಯ ತಲೆಗೆ ಐದಾರು ಬಾರಿ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ಹೇಳಿದರು.
ಪೊಲೀಸ್ ಠಾಣೆಗೆ ಶರಣು:
ಕೃತ್ಯ ಎಸಗಿದ ಬಳಿಕ ಕೆಲ ಹೊತ್ತು ಪತ್ನಿಯ ಶವದ ಮುಂದೆ ಕೂತು ಕಣ್ಣೀರು ಹಾಕಿದ್ದಾನೆ. ಬಳಿಕ ಮಲಗಿದ್ದ ಮೂವರು ಮಕ್ಕಳನ್ನು ಎಚ್ಚರಗೊಳಿಸಿ ಸಮೀಪದಲ್ಲಿರುವ ತನ್ನ ಸಹೋದರಿಯ ಮನೆಗೆ ಕರೆದೊಯ್ದು ಬಿಟ್ಟಿದ್ದಾನೆ. ನಂತರ ಕುಡುಗೋಲಿನ ಸಮೇತ ಗೋವಿಂದಪುರ ಪೊಲೀಸ್ ಠಾಣೆಗೆ ಶರಣಾಗಿ, ಪತ್ನಿ ಕೊಂದಿದ್ದೇನೆ. ಆಕೆಗೆ ಬೇರೊಬ್ಬ ಗಂಡಸಿನ ಜತೆ ಸಂಬಂಧ ಇತ್ತು. ಹೀಗಾಗಿ ತನ್ನನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಹೀಗಾಗಿ ಕೊಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಪ್ರಕ್ರಿಯೆ ನಡೆಸಿ ಬಂಧಿಸಿದ್ದಾರೆ.