ಖೋವಾಯಿ: ಮಹಿಳೆಯೊಬ್ಬಳು ತನ್ನ ಗಂಡನ ತಲೆಯನ್ನು ಕಡಿದು, ಅದನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕಟ್ಟಿಕೊಂಡು ಸೀದಾ ತಮ್ಮ ಕುಟುಂಬದ ಕುಲದೇವರ ದೇವಸ್ಥಾನದಲ್ಲಿಟ್ಟು ಬಂದ ಘಟನೆ ತ್ರಿಪುರಾದ ಖೋವಾಯಿ ಜಿಲ್ಲೆಯಲ್ಲಿ ನಡೆದಿದೆ.

ಮೃತನನ್ನು 50 ವರ್ಷದ ರವೀಂದ್ರ ತಂತಿ ಎಂದು ಗುರುತಿಸಲಾಗಿದೆ.
ದಿನಗೂಲಿ ನೌಕರನಾಗಿದ್ದ ರವೀಂದ್ರ ಶುಕ್ರವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಅಚ್ಚರಿ ಕಾದಿತ್ತು. ಯಾವತ್ತೂ ಮಾಂಸಾಹಾರ ಸೇವಿಸದ ಪತ್ನಿಯು ಚಿಕನ್ ಅಡುಗೆ ಮಾಡಿದ್ದಳು.
ಅದನ್ನೇ ಸೇವಿಸಿದ ಆಕೆಯು ಎಲ್ಲರೊಂದಿಗೆ ರಾತ್ರಿ ಮಲಗಿದ್ದಳು. ಬೆಳಗ್ಗೆ ಮಕ್ಕಳು ಎದ್ದಾಗ ರಕ್ತದ ಮಡುವಿನಲ್ಲಿ ತಾಯಿ ನಿಂತಿರುವುದನ್ನು ಕಂಡು ಗಾಬರಿಯಾಗಿದ್ದಾರೆ.

ತಂದೆಯನ್ನು ಹುಡುಕಾಡಿದಾಗ ರುಂಡವಿಲ್ಲದ ಶರೀರ ಮಾತ್ರ ಕಂಡಿದೆ. ಕೂಡಲೇ ಅಕ್ಕಪಕ್ಕದವರಿಗೆ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ತಪಾಸಣೆ ನಡೆಸಿದಾಗ ರವೀಂದ್ರ ಅವರ ರುಂಡವು ಸಮೀಪದ ದೇವಸ್ಥಾನದಲ್ಲಿ ಪತ್ತೆಯಾಗಿದೆ.
ತನ್ನ ತಾಯಿಗೆ ಕೆಲ ದಿನಗಳಿಂದ ಮಾನಸಿಕ ಕಾಯಿಲೆ ಇದ್ದು, ಆಕೆ ಇತ್ತೀಚೆಗೆ ತಾಂತ್ರಿಕರ ಬಳಿ ಹೋಗಿ ಬರುತ್ತಿದ್ದಳು. ತನಗೂ ಮಾನಸಿಕ ಅಸ್ವಸ್ಥತೆ ಇದೆ ಎಂದು ಮೃತ ರವೀಂದ್ರ ಅವರ ಹಿರಿಯ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
