ಮಂಗಳೂರು: ಹಿಂದೂ ಮಹಿಳೆ ಜೊತೆ ಅನ್ಯ ಕೋಮಿನ ಯುವಕ ಪ್ರಯಾಣಿಸುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಮಂಗಳೂರು ಹೊರವಲಯದ ಗುರುಪುರ ಬಳಿ ಬಸ್ ತಡೆದು ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ನಡೆದಿದೆ.
ಖಾಸಗಿ ಬಸ್ಸಿನಲ್ಲಿ ಮೂಡುಬಿದರೆಯಿಂದ ಮಂಗಳೂರಿನತ್ತ ಯುವಕ ಮತ್ತು ವಿವಾಹಿತ ಮಹಿಳೆ ಜತೆಯಾಗಿ ಪ್ರಯಾಣ ಮಾಡುತ್ತಿದ್ದರು. ಬಸ್‌ನಲ್ಲಿ ಇವರ ಅನುಮಾನಾಸ್ಪದ ನಡವಳಿಕೆ ಹಿನ್ನೆಲೆಯಲ್ಲಿ ಗುರುಪುರದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಬಸ್‌ನ್ನು ತಡೆದಿದ್ದಾರೆ. ಬಳಿಕ ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಇವರಿಬ್ಬರೂ ಹಿಂದೂಗಳೇ ಎಂದು ಗೊತ್ತಾಗಿದೆ.
ಯುವತಿ ಮಂಗಳೂರು ತಾಲೂಕಿನ ಮಿಜಾರು ಗ್ರಾಮದವಳಾಗಿದ್ದು, ಮುಂಬೈನಲ್ಲಿದ್ದಾಗ ಬಿಹಾರದ ಯುವಕನೊಂದಿಗೆ ಪ್ರೇಮ ಉಂಟಾಗಿತ್ತು. ಸದ್ಯ ಈಕೆಗೆ ಬೆಂಗಳೂರು ಮೂಲದ ಯುವಕನ ಜತೆ ವಿವಾಹ ಆಗಿತ್ತು.
ಆದರೂ ಬಿಹಾರ ಮೂಲದ ಯುವಕನ ಜತೆ ಪ್ರೇಮ ಸಂಬಂಧ ಮುಂದುವರಿದಿತ್ತು. ಹೀಗಾಗಿ ಬಿಹಾರದಿಂದ ಆಗಮಿಸಿದ ಯುವಕ ಯುವತಿ ಜೊತೆ ಬಸ್ಸಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದ. ಮೂಡುಬಿದಿರೆಯಿಂದ ಮಂಗಳೂರಿಗೆ ಸುತ್ತಾಡಲು ಈ ಜೋಡಿ ಬಸ್ಸಿನಲ್ಲಿ ಬರುತ್ತಿದ್ದರು. ಬಜಪೆ ಪೊಲೀಸರು ಮುಚ್ಚಳಿಕೆ ಬರೆಸಿ ಬುದ್ಧಿಹೇಳಿ ಕಳುಹಿಸಿದ್ದಾರೆ.