ಉಡುಪಿ: ಕಾಪುವಿನ ಗುಜರಿ ಅಂಗಡಿಯಲ್ಲಿ ನಡೆದ ಭೀಕರ ಸಿಲಿಂಡರ್ ಸ್ಪೋಟದಲ್ಲಿ ಗಂಭೀರ ಗಾಯಗೊಂಡಿದ್ದ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದು, ಮೃತರ ಸಂಖ್ಯೆ ಇಂದು 4ಕ್ಕೇರಿದೆ.
ಮಲ್ಲಾರು ಗ್ರಾಮದ ಗುಡ್ಡೇಕೆರಿ ಸಲಫಿ ಮಸೀದಿ ಬಳಿಯ ಗುಜರಿ ಅಂಗಡಿಯಲ್ಲಿ ಮಾ.21ರಂದು ನಡೆದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಮೃತರನ್ನು ಗುಜರಿ ಅಂಗಡಿಯಲ್ಲಿ ಕಾರ್ಮಿಕರಾಗಿದ್ದ ಸಾಗರ ಮೂಲದ ನಯಾಝ್(36) ಮತ್ತು ವೀರಪ್ಪ ಎಂದು ಗುರುತಿಸಲಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಮಾ.21ರಂದು ಬೆಳಗ್ಗೆ ಗುಜರಿ ಅಂಗಡಿಯಲ್ಲಿ ಕಂಪ್ರೆಸರ್ ಅನ್ನು ಗ್ಯಾಸ್ ಕಟ್ಟರ್ ಮೂಲಕ ತುಂಡರಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿತ್ತು. ಈ ವೇಳೆ ಇಬ್ಬರು ಸಜೀವ ದಹನಗೊಂಡಿದ್ದರೆ, ಐವರು ಗಂಭೀರವಾಗಿ ಗಾಯಗೊಂಡಿದ್ದರು.
ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಬೆಳಪು ಗ್ರಾಮ ಪಂಚಾಯತ್ ಸದಸ್ಯ ಫಹೀಮ್ ಮಣಿಪಾಲ ಆಸ್ಪತ್ರೆಯಲ್ಲಿ ಹಾಗೂ ಇನ್ನೊಬ್ಬರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.