ಭುವನೇಶ್ವರ: ಹಿಂದಿನಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಎರಡು ಟ್ರಕ್‌ಗಳ ನಡುವೆ ಕಾರೊಂದು ಅಪ್ಪಚ್ಚಿಯಾದ ಭೀಕರ ಘಟನೆ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳಲ್ಲಿ ಟ್ರಕ್ ರಸ್ತೆಯಲ್ಲಿ ನಿಂತಿರುವುದು ಕಂಡುಬಂದಿದೆ. ಅದರ ಹಿಂದೆಯೇ ಎರಡು ಕಾರುಗಳು ಸಹ ನಿಂತಿವೆ. ಕೆಲವು ಕ್ಷಣಗಳ ನಂತರ ಡಂಪ್ ಲಾರಿ, ಕಾರ್ ಒಂದಕ್ಕೆ ಡಿಕ್ಕಿ ಹೊಡೆದು, ನಂತರ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಎಡಕ್ಕೆ ತಿರುಗಿತು. ಇದರಿಂದ ಕಾರು ಅಪ್ಪಚ್ಚಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಡಂಪ್ ಲಾರಿ ಮತ್ತು ಅದರ ಮುಂದೆ ಇರುವ ಟ್ರಕ್ ನಡುವೆ ಸಿಲುಕಿದ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅದರೊಳಗೆ ಇದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಭುವನೇಶ್ವರದ ಪಲಸುನಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ಈ ದುರ್ಘಟನೆ ನಡೆದಿದೆ. ಒಡಿಶಾದ ದಿನಪತ್ರಿಕೆ ಸಂಬಾದ್ ಪ್ರಕಾರ, ಈ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಮತ್ತು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಟಕ್ ಕಡೆಗೆ ಹೋಗುತ್ತಿದ್ದವು ಎನ್ನಲಾಗಿದೆ.
ಈ ಟ್ರಕ್ಗಳು ಮತ್ತು ಕಾರಿನ ನಡುವೆ ನಡೆದ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು ಎಂದು ವರದಿ ತಿಳಿಸಿದೆ. ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.