ಮಂಗಳೂರು: ಮದ್ಯ ಮತ್ತು ಗಾಂಜಾದ ಅಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಲವರಿಗೆ ಕಲ್ಲು, ಹೆಲ್ಮೆಟ್‌ನಿಂದ ಹೊಡೆದು ಚೂರಿಯಿಂದ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ರೌಡಿಶೀಟರ್‌ಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಹಲ್ಲೆ ವೀಡಿಯೋ ವೈರಲ್ ಆಗಿದೆ.
ಬಂಧಿತ ಆರೋಪಿಗಳನ್ನು ಬಜಾಲ್ ಜಲ್ಲಿಗುಡ್ಡೆಯ ಪ್ರೀತಂ ಪೂಜಾರಿ (27) ಮತ್ತು ಪಡೀಲ್‌ನ ಧೀರಜ್ ಕುಮಾರ್ (25) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ವೆಲೆನ್ಸಿಯಾದ ಜಂಕ್ಷನ್ ಬಳಿಯ ಕೋಳಿ ಮಾಂಸದ ಅಂಗಡಿ ಬಳಿ ಈ ಇಬ್ಬರು ರೌಡಿಶೀಟರ್‌ಗಳು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸುತ್ತಿದ್ದರು.
ಇದನ್ನು ಕಂಡ ಸ್ಥಳೀಯ ಐಡಿಯಲ್ ಚಿಕನ್ ಅಂಗಡಿಯ ಸಿಬ್ಬಂದಿಗಳಾದ ಸುನೀಲ್ ಮಾರ್ಡಿ, ಅನಂತ, ಜೀವನ್ ಎಂಬವರು ಆಕ್ಷೇಪಿಸಿದರು.
ಇದರಿಂದ ಕುಪಿತಗೊಂಡ ರೌಡಿಶೀಟರ್‌ಗಳು ಐಡಿಯಲ್ ಚಿಕನ್ ಅಂಗಡಿಯ ಸಿಬ್ಬಂದಿಗಳಿಗೆ ಕಲ್ಲು ಮತ್ತು ಹೆಲ್ಮೆಟ್ ನಿಂದ ಹಲ್ಲೆ ನಡೆಸಿ ಚೂರಿಯಿಂದ ಇರಿಯಲು ಯತ್ನಿಸಿದರು.
ಅಷ್ಟರಲ್ಲಿ ಜಮಾಯಿಸಿದ ಸಾರ್ವಜನಿಕರು ಮಧ್ಯ ಪ್ರವೇಶಿಸಿದಾಗ ರೌಡಿಶೀಟರ್‌ಗಳು ಅವರಿಗೂ ಚೂರಿ ತೋರಿಸಿ ಬೆದರಿಸಿ ಭಯಭೀತಿ ಸೃಷ್ಟಿಸಿದರು.
ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ತಕ್ಷಣ ಧಾವಿಸಿ ಇಬ್ಬರು ರೌಡಿಶೀಟರ್‌ಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಗಾಂಜಾ ಮತ್ತು ಮದ್ಯ ಸೇವನೆ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಧೀರಜ್ ವಿರುದ್ಧ ದರೋಡೆ, ದರೋಡೆಗೆ ಸಂಚು, ಕೊಲೆಯತ್ನ, ಹಲ್ಲೆ ಪ್ರಕರಣ ಸೇರಿ 8 ಪ್ರಕರಣ ದಾಖಲಾಗಿತ್ತು.ಪ್ರೀತಮ್ ಮೇಲೆ ದರೋಡೆ, ಕೊಲೆಯತ್ನ, ಗಾಂಜಾ ಸೇವನೆ ಸೇರಿ 10 ಪ್ರಕರಣ ದಾಖಲಾಗಿತ್ತು.