dtvkannada

ಬೆಂಗಳೂರು: ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ನಡೆಯುತ್ತಿರುವ ಕಾಂಗ್ರೆಸ್ ನಾಯಕರ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ತಡೆದಿದ್ದಾರೆ. ರೇಸ್‌ ಕೋರ್ಸ್‌ ರಸ್ತೆಯಲ್ಲಿ ಕೈ ನಾಯಕರ ರಾಲಿಗೆ ತಡೆ ಒಡ್ಡಲಾಗಿದೆ. ಪ್ರತಿಭಟನಾನಿರತ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಕಾಂಗ್ರೆಸ್‌ ನಾಯಕರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್ ಭವನದಿಂದ ಆರಂಭವಾಗಿದ್ದ ಪ್ರತಿಭಟನಾ ರಾಲಿ ಸಾಗುತ್ತಿತ್ತು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ, ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನಾ ರಾಲಿ ನಡೆಸಲಾಗಿತ್ತು.

ಸಂತೋಷ್ ಪಾಟೀಲ್ ಸಾವಿಗೆ ಸಚಿವ ಈಶ್ವರಪ್ಪ ಕಾರಣ. ಮೃತ ಸಂತೋಷ್ ಪಾಟೀಲ್ ಸ್ಪಷ್ಟವಾಗಿ ಹೇಳಿದ್ದಾರೆ. ಸಂತೋಷ್ ಪಾಟೀಲ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ. ನಿನ್ನೆ ಸಂತೋಷ್ ಮನೆಗೆ ಭೇಟಿ ಮಾಡಿ ಸಾಂತ್ವ ಹೇಳಿದ್ದೇವೆ. ಮೃತ ಸಂತೋಷ್ ಕುಟುಂಬಸ್ಥರು ಬಹಳ ದುಃಖದಲ್ಲಿದ್ದಾರೆ. ಸಂತೋಷ್ ಸಾವಿಗೆ ಸಚಿವ ಈಶ್ವರಪ್ಪನವರೇ ನೇರ ಕಾರಣ. ಈ ಮಾತನ್ನು ಸಂತೋಷ್ ಪತ್ನಿ, ತಾಯಿ ಕೂಡ ಹೇಳಿದ್ದಾರೆ. ಸಂತೋಷ್ ಕುಟುಂಬಸ್ಥರಿಗೆ ಧೈರ್ಯ ತುಂಬಿ ಬಂದಿದ್ದೇವೆ. ಸಂತೋಷ್ ಆತ್ಮಹತ್ಯೆಗೆ 40 ಪರ್ಸೆಂಟ್ ಲಂಚ ಕಾರಣ. ಸಚಿವ ಕೆ.ಎಸ್.ಈಶ್ವರಪ್ಪ 40 ಪರ್ಸೆಂಟ್ ಲಂಚ ಕೇಳಿದ್ದಾರೆ. 1 ಕೋಟಿ 60 ಲಕ್ಷ ರೂಪಾಯಿ ಲಂಚವನ್ನು ಕೇಳಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಂತೋಷ್ ಕಾಮಗಾರಿ ಮಾಡಿಸಲು ಪತ್ನಿ ಒಡವೆ ಅಡವಿಟ್ಟಿದ್ದರು. ಜೊತೆಗೆ ಖಾಸಗಿಯವರಿಂದಲೂ ಸಂತೋಷ್ ಸಾಲ ಪಡೆದಿದ್ದರು. ಸಾಲ ಪಡೆದು ಕಾಮಗಾರಿ ಮಾಡಿಸಿದ್ದಾರೆ. ಇದರ ನಡುವೆ ಲಂಚ ಹೇಗೆ ಕೊಡೋದು ಎಂದು ಕೇಳಿದ್ದಾರೆ. ಇದೀಗ ಈಶ್ವರಪ್ಪ ತನಗೆ ಸಂತೋಷ್ ಗೊತ್ತಿಲ್ಲ ಎನ್ನುತ್ತಾರೆ. ಆದರೆ ಸಂತೋಷ್ ಭೇಟಿಯಾಗಿರುವುದು ಜಗಜ್ಜಾಹೀರಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಜತೆ ಭೇಟಿಯಾಗಿದ್ದಾರೆ. ಸಚಿವ ಈಶ್ವರಪ್ಪರನ್ನು ಲೋಕೇಶ್, ಸಂತೋಷ್ ಭೇಟಿಯಾಗಿದ್ದಾರೆ. ಸಂತೋಷ್ ಕಾಮಗಾರಿ ಮಾಡಿಸಿದ್ದಾರೆಂದು ಲೋಕೇಶ್ ಹೇಳಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ಹೇಳದೆ ಕಾಮಗಾರಿ ಮಾಡುತ್ತಾರಾ? ಕೆಲಸವಾಗಿರುವುದು ನಿಜ, ಈಶ್ವರಪ್ಪನವರು ಹೇಳಿರುವುದೂ ನಿಜ. ಮೃತ ಸಂತೋಷ್ ಪಾಟೀಲ್ ಶ್ರೀಮಂತ ಕುಟುಂಬವಲ್ಲ. ಹೀಗಾಗಿ ಸಂತೋಷ್ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು. ಸಂತೋಷ್ ಪಾಟೀಲ್ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬಿಜೆಪಿಯವರು ಲಜ್ಜೆಗೆಟ್ಟವರು, ಭಂಡರು, ಮರ್ಯಾದೆ ಇಲ್ಲದವರು. ಈಶ್ವರಪ್ಪ ಸಚಿವ ಸ್ಥಾನದಲ್ಲಿದ್ದರೆ ಸೂಕ್ತ ರೀತಿ ತನಿಖೆ ಆಗುತ್ತಾ? ನಿಷ್ಪಕ್ಷಪಾತ ತನಿಖೆಯಾಗುತ್ತಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಈಶ್ವರಪ್ಪಗೆ ರಕ್ಷಣೆ ನೀಡುತ್ತಿದ್ದಾರೆ. ಹೈಕೋರ್ಟ್ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರದ ಭ್ರಷ್ಟಾಚಾರ ವಿರುದ್ಧ ನಿರಂತರ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿರುವುದು ಭ್ರಷ್ಟ ಸರ್ಕಾರ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೆಪಿಸಿಸಿಯಿಂದ ಅಂಬೇಡ್ಕರ್ ಜನ್ಮದಿನಾಚರಣೆ ಮಾಡುತ್ತಿದ್ದೇವೆ. ಇಂದು ಮಹದೇವಪುರದಲ್ಲಿ ಜನ್ಮದಿನಾಚರಣೆ ಆಯೋಜನೆ ಮಾಡಲಾಗಿದೆ. ಡಾ.ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುತ್ತೇವೆ. ಬಳಿಕ ಸಿಎಂ ಬೊಮ್ಮಾಯಿ ನಿವಾಸಕ್ಕೆ ಘೇರಾವ್ ಹಾಕ್ತೇವೆ. ಸಂವಿಧಾನ ಉಳಿವು, ಭ್ರಷ್ಟಾಚಾರ ನಿರ್ಮೂಲನೆಗಾಗಿ ಮುತ್ತಿಗೆ ಹಾಕುತ್ತೇವೆ. ಕೋರ್ಟ್ ರಸ್ತೆಯಲ್ಲಿ ಪ್ರತಿಭಟನೆ ಮಾಡಲು ನಿರ್ಬಂಧ ಇದೆ. ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಕೇಸ್ ಹಾಕಿಲ್ಲ. ಸಂತೋಷ್ ಕೆಲಸ ಮಾಡಿದ್ದ ಎಂಬುದಕ್ಕೆ ಫೋಟೋಗಳೇ ಇವೆ. ಕೂಡಲೇ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು. ಈ ಸಂಬಂಧ ಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ಆಗಬೇಕು ಎಂದು ಮೆರವಣಿಗೆಗೂ ಮುನ್ನ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರು.

ಡಿ.ಕೆ ರವಿ ಸೂಸೈಡ್ ವೇಳೆ ಜಾರ್ಜ್ ರಾಜೀನಾಮೆ ಒತ್ತಾಯಿಸಿದ್ರು. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ವೇಳೆಯೂ ಆಪಾದನೆ ಮಾಡಿದ್ರು. ಜಾರ್ಜ್ ಅವರ ಮೇಲೆ ಯಾವುದೇ ಆಪಾದನೆ ಇರಲಿಲ್ಲ, ಕ್ಲೀನ್ ಚೀಟ್ ಸಿಕ್ತು. ತನಿಖೆಯಲ್ಲಿ ಅವೆಲ್ಲವೂ ಸುಳ್ಳು ಅಂತ ಗೊತ್ತಾಗಿದೆ. ಈಗ ಸ್ವತಃ ಸಂತೋಷ್ ಡೆತ್ ನೋಟ್ ನಲ್ಲಿ ಬರೆದು ಸೂಡೈಡ್ ಮಾಡಿಕೊಂಡಿದ್ದಾರೆ. ಸಾಕ್ಷಿ ಇದ್ರೂ ಈಶ್ವರಪ್ಪ ರಾಜೀನಾಮೆಗೆ ಮುಂದಾಗ್ತಿಲ್ಲ. ದೆಹಲಿಗೂ ಹೋಗಿದ್ರು, ಕೇಂದ್ರದ ಗಮನಕ್ಕೂ ತಂದಿದ್ದಾರೆ. ಮುಖ್ಯಮಂತ್ರಿಗೆ ರಾಜೀನಾಮೆ ಪಡೆಯುವ ಶಕ್ತಿ ಇಲ್ಲ. ಅದಕ್ಕೆ ಮುಖ್ಯಂಮತ್ರಿಗಳು ಸುಮ್ಮನೆ ಕೂತಿದ್ದಾರೆ. ಇವತ್ತು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕ್ತೀವಿ. ಗುತ್ತಿಗೆದಾರರು 40% ಕಮಿಷನ್ ಅಂತೇಳಿ ಪಿಎಂಗೆ ಪತ್ರ ಬರೆದಿದ್ದಾರೆ. ಇನ್ನು 7-8 ಸಚಿವರ ಬಗ್ಗೆಯೂ ಗುತ್ತಿಗೆದಾರರು ಮಾತನಾಡಿದ್ದಾರೆ. ಭ್ರಷ್ಟಾಚಾರವನ್ನ ನಿಯಂತ್ರಣದಲ್ಲಿಡಬೇಕು. ಆದರಿಲ್ಲಿ ನಿಯಂತ್ರಣದಲ್ಲಿ ಇಡುವವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯರ ಸರ್ಕಾರವನ್ನ ಮೋದಿ ಕಮಿಷನ್ ಸರ್ಕಾರ ಅಂದಿದ್ರು. ಮೋದಿಯವರು ನಾನೂ ತಿನ್ನೊಲ್ಲ, ಬೇರೆಯವರಿಗೂ ಭ್ರಷ್ಟಾಚಾರ ಮಾಡೋಕೆ ಬಿಡೊಲ್ಲ ಅಂತಿದ್ರು. ಇವತ್ತು ಏನಾಗ್ತಿದೆ ಮೋದಿಯವರೇ? ಮೋದಿ ಈಗ ತುಟಿಕ್ ಪಿಟಿಕ್ ಅಂತಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಮಲಿಂಗರೆಡ್ಡಿ ಕಿಡಿಕಾರಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕೂಡ ಸಿಎಂ ಬೊಮ್ಮಾಯಿಗೆ ಪ್ರತಿಭಟನೆ ಬಿಸಿ ಎದುರಾಗಿದೆ. ಸಿಎಂ ಭಾಷಣ ಆರಂಭಿಸುತ್ತಿದ್ದಂತೆಯೇ ಸಭಿಕರ ಮಧ್ಯದಿಂದ ಓಡಿ ಬಂದು ಪ್ರತಿಭಟನಾಕಾರರು ಕೂಗಾಡಿದ್ದಾರೆ. ಎಲ್ಲಾ ಕಡೆ ಇದೇ ಮಾಡ್ತೀರಿ, ಈಗ ಸುಮ್ಮನಿರಿ ಎಂದು ಸಿಎಂ ಹೇಳಿದ್ದಾರೆ. ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ಕರೆದೊಯ್ದಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!