ಉಡುಪಿ: ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳಿಬ್ಬರು ಸೆಲ್ಫಿ ತೆಗೆಯಲು ಹೋಗಿ ಮಲ್ಪೆ ಬೀಚ್‌ನ ಸೈಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಸಮುದ್ರಪಾಲಾದ ಘಟನೆ ಇಂದು ನಡೆದಿದೆ.

ನೀರು ಪಾಲಾದ ಯುವಕರು ಬಾಗಲಕೋಟೆ ಮೂಲದ ಸತೀಶ್ ಎಸ್ ಕಲ್ಯಾಣ್ ಶೆಟ್ಟಿ (21) ಮತ್ತು ಹಾವೇರಿಯ ಸತೀಶ್ ಎಂ ನಂದಿಹಳ್ಳಿ (21) ಎಂದು ತಿಳಿದು ಬಂದಿದೆ.
ಘಟನೆ ವಿವರ
ಬೆಂಗಳೂರಿನ ಜಿಕೆವಿಕೆ ಕೃಷಿ ಕಾಲೇಜಿನಿಂದ ಸೈಂಟ್ ಮೆರೀಸ್ ಐಲ್ಯಾಂಡ್‌ಗೆ ಪ್ರವಾಸಕ್ಕೆ 68 ವಿದ್ಯಾರ್ಥಿಗಳು ಬಂದಿದ್ದರು.ನೀರಿನಲ್ಲಿ ಆಟವಾಡುತ್ತಾ ಮುಂದೆ ಮುಂದೆ ತೆರಳಿ ಸೆಲ್ಫಿ ತೆಗೆಯುತ್ತಿದ್ದಾಗ ಸ್ಥಳದಲ್ಲೇ ಇದ್ದ ಲೈಫ್ ಗಾರ್ಡ್ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಮೀರಿ ಸೆಲ್ಫಿ ತೆಗೆಯಲು ಹೋದ ಯುವಕರು ನೀರುಪಾಲಾಗಿದ್ದಾರೆ. ಇಬ್ಬರಲ್ಲಿ ಓರ್ವನ ಶವ ಪತ್ತೆಯಾಗಿದೆ. ಮತ್ತೊಬ್ಬನ ಶವ ಪತ್ತೆಯಾಗಿಲ್ಲ.

ಸೈಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಅಪಘಾತ ವಲಯ ಎಂದು ಬೋರ್ಡ್ ಹಾಕಿದ್ದರೂ ಹೆಚ್ಚಿನ ಪ್ರವಾಸಿಗರು ಅದನ್ನು ಲೆಕ್ಕಿಸದೆ ನೀರಿಗಿಳಿಯುತ್ತಿದ್ದಾರೆ ಎಂದು ಲೈಫ್‌ಗಾರ್ಡ್‌ಗಳು ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಸ್ಥಳಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ ಕೇರಳ ಮೂಲದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇದು ಒಂದೇ ತಿಂಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ.