ನಿನ್ನೆ ನಡೆದ ಡೆಲ್ಲಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವಣ ಪಂದ್ಯದಲ್ಲಿ ನಡೆದ ನೋ ಬಾಲ್ ವಿವಾದ ದೊಡ್ಡ ಮಟ್ಟದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಡೆಲ್ಲಿ ನಾಯಕ ರಿಷಬ್ ಪಂತ್ ವರ್ತಿಸಿದ ರೀತಿ ಮತ್ತು ಸಹಾಯಕ ಕೋಚ್ ಪ್ರವೀನ್ ಆಮ್ರೆ ನೇರವಾಗಿ ಮೈದಾನಕ್ಕೆ ಪ್ರವೇಶಿಸಿ ಅಂಪೈರ್ ಜೊತೆ ಚರ್ಚಿಸಿದ್ದಕ್ಕೆ ಪರ ವಿರೋಧಳು ವ್ಯಕ್ತವಾಗುತ್ತಿದೆ.
ಇದೀಗ ಐಪಿಎಲ್ ನಿಯಮ ಉಲ್ಲಂಘಿಸದ್ದಕ್ಕೆ ರಿಷಬ್ ಪಂತ್ ಬಾಗೂ ಪ್ರವೀಣ್ ಆಮ್ರೆ ಅವರಿಗೆ ಐಪಿಎಲ್ ಆಡಳಿತ ಮಂಡಳಿ ದಂಡ ವಿಧಿಸಿದೆ. ಪಂತ್ ಅವರು ಐಪಿಎಲ್ ನಿಯಮ ಲೆವೆಲ್ -೨ ಅನ್ನು ಉಲ್ಲಂಘನೆ ಮಾಡಿದ್ದಕ್ಕೆ ಆ ಪಂದ್ಯದ ಸಂಪೂರ್ಣ ಮೊತ್ತವನ್ನು ಖಡಿತಗೊಳಿಸಲಾಗಿದೆ.
ಅಲ್ಲದೇ ಸಹಾಯಕ ಕೋಚ್ ಪ್ರವೀಣ್ ಅವರಿಗೂ ದಂಡ ವಿಧಿಸಿದ್ದು, ಶೇ.100 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ಕಟ್ಟಬೇಕಾಗಿದೆ. ಮಾತ್ರವಲ್ಲದೇ ಒಂದು ಪಂದ್ಯದಿಂದ ನಿಷೇಧ ಕೂಡ ಹೇರಲಾಗಿದೆ. ಶಾರ್ದೂಲ್ ಠಾಕೂರ್ ಅವರಿಗೂ ಪಂದ್ಯದ ಶೇ.50 ರಷ್ಟು ಮೊತ್ತವನ್ನು ಖಡಿತಗೊಳಿಸಲಾಗಿದೆ.
ರಾಜಸ್ಥಾನ್ ರಾಯಲ್ಸ್ ನೀಡಿದ್ದ 223 ರನ್‌ಗಳ ಟಾರ್ಗೆಟ್ ಅನ್ನು ಬೆನ್ನಟ್ಟಲು ಹೊರಟ ಡೆಲ್ಲಿಗೆ ಗೆಲ್ಲಲು ಕೊನೇ ಓವರ್‌ನಲ್ಲಿ 36 ರನ್ಗಳು ಬೇಕಾಗಿತ್ತು. ಅಂದರೆ ಆರು ಬಾಲ್ನಲ್ಲಿ 6 ಸಿಕ್ಸರ್. ರಾಯಲ್ಸ್ ಪರ ಅಂತಿಮ ಓವರ್ ಎಸೆದ ಒಬೆಡ್ ಮೆಕಾಯ್ ಎದುರು ದಿಲ್ಲಿ ಬ್ಯಾಟರ್ ರೋವ್ಮನ್ ಪೊವೆಲ್ ಒಂದು ಕ್ಷಣ ಡೆಲ್ಲಿ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಯಾಕೆಂದರೆ ಮೆಕಾಯ್ ಅವರ ಮೊದಲ ಮೂರು ಎಸೆತಗಳಲ್ಲಿ ಪೊವೆಲ್ ಸಿಕ್ಸರ್ ಬಾರಿಸಿದ್ದರು. ಮೊದಲ ಮೂರು ಎಸೆತಗಳಲ್ಲಿ ಲೀಲಾಜಾಲವಾಗಿ ಸಿಕ್ಸ್ ಸಿಡಿಸಿದ್ದ ಪೊವೆಲ್ಗೆ ಮುಂದಿನ 3 ಎಸೆತಗಳಲ್ಲಿ ಸಿಕ್ಸ್ ಸಿಡಿಸುವುದು ದೊಡ್ಡ ಸವಾಲೇನು ಆಗಿರಲಿಲ್ಲ. ಆದರೆ, ಅಲ್ಲಿ ನಡೆದ ಹೈ ಡ್ರಾಮ್ ಇಡೀ ಚಿತ್ರಣವನ್ನೇ ಬದಲಾಯಿಸಿತು.
ಮೆಕಾಯ್ ಹಾಕಿದ 3ನೇ ಎಸೆತ ಫುಲ್ ಟಾಸ್ ಆಗಿದ್ದು ಇದನ್ನು ಕೂಡ ಪೊವೆಲ್ ಸಿಕ್ಸ್ಗೆ ಅಟ್ಟಿದ್ದರು. ಆದರೆ, ಇದು ಅವರ ಸೊಂಟದ ಭಾಗಕ್ಕಿಂತಲೂ ಮೇಲಿದೆ, ಅದು ನೋ-ಬಾಲ್ ಎಂದು ಡೆಲ್ಲಿ ವಾದಕ್ಕಿಳಿತು. ಆದರೆ, ಅಂಪೈರ್ ಇದು ನೋ ಬಾಲ್ ಅಲ್ಲ ಎಂದು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಸಿಟ್ಟಾದ ಡೆಲ್ಲಿ ನಾಯಕ ರಿಷಭ್ ಪಂತ್ ಇದು ಅನ್ಯಾಯ ಎಂದು ಮೈದಾನದಲ್ಲಿದ್ದ ತಮ್ಮ ಬ್ಯಾಟರ್‌ಗಳಾದ ರೋವ್ಮನ್ ಪೊವೆಲ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಪವಿಲಿಯನ್‌ಗೆ ಹಿಂದಿರುಗುವಂತೆ ಬೌಂಡರಿ ಗೆರೆ ಬಳಿ ನಿಂತು ಡಿಕ್ಲೇರ್ ಘೋಷಿಸಲು ಮುಂದಾದರು.
ಇದರ ಜೊತೆಗೆ ಪಂತ್ ತಮ್ಮ ತಂಡದ ಕೋಚ್ ಪ್ರವೀಣ್ ಆಮ್ರೆ ಅವರನ್ನು ಅಂಪೈರ್ ಬಳಿ ಚರ್ಚಿಸಲು ಮೈದಾನಕ್ಕೆ ಕಳುಹಿಸಿದರು. ಅಂಗಣಕ್ಕೆ ಧಾವಿಸಿ ಆನ್ ಫೀಲ್ಡ್ ಅಂಪೈರ್ಗಳ ಜೊತೆಗೆ ಚರ್ಚಿಸಿ ಕನಿಷ್ಠ ಮೂರನೇ ಅಂಪೈರ್‌ಗೆ ಈ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಆದರೆ, ಲೆಗ್ ಅಂಪೈರ್ ಅದು ನೋ-ಬಾಲ್ ಅಲ್ಲ ಎಂದು ತೀರ್ಪು ನೀಡಿದ್ದ ಕಾರಣ, ಅದೇ ತೀರ್ಪಿಗೆ ಬದ್ಧರಾಗಿ ನಿಂತು ಆಟ ಮುಂದುವರಿಸಲು ಆನ್‌ಫೀಲ್ಡ್ ಅಂಪೈರ್‌ಗಳು ತೀರ್ಮಾನಿಸಿದರು. ಅತ್ತ ಬೌಂಡರಿ ಗೆರೆ ಬಳಿಯಿದ್ದ ಆರ್ ಆರ್ ಬ್ಯಾಟರ್ ಜಾಸ್ ಬಟ್ಲರ್ ಜೊತೆಗೂ ಪಂತ್ ರೇಗಾಡಿದರು. ಹಿರಿಯ ಆಟಗಾರ ಶೇನ್ ವಾಟ್ಸನ್ ಮೇಲೂ ಕೋಪಗೊಂಡರು.
ಅಂತಿಮವಾಗಿ ಡೆಲ್ಲಿಗೆ ಕೊನೆಯ 3 ಎಸೆತಗಳಲ್ಲಿ ಗೆಲ್ಲಲು 18 ರನ್ಗಳ ಅವಶ್ಯಕತೆಯಿತ್ತು. ಮೊದಲ ಮೂರೂ ಎಸೆಸತಗಳಲ್ಲಿ ಸಿಕ್ಸರ್ ಬಾರಿಸಿದ್ದ ಪೊವೆಲ್, ನಂತರದ ಮೂರು ಎಸೆಸತಗಳಲ್ಲಿ 1 ರನ್ ಕೂಡ ಗಳಿಸಲಿಲ್ಲ. 145 ಎಸೆತಗಲ್ಲಿ 36 ರನ್ ಗಳಿಸಿದ್ದ ಇವರು ಕೊನೇ ಎಸೆತದಲ್ಲಿ ಕೀಪರ್ಗೆ ಕ್ಯಾಚಿತ್ತು ಔಟಾದರು. ಒಟ್ಟಾರೆ ಐಪಿಎಲ್ 2022ರ ಮೊದಲ ವಿವಾದಕ್ಕೆ ಡೆಲ್ಲಿ ಹಾಗೂ ರಾಜಸ್ಥಾನ್ ನಡುವಣ ಕದನ ಸಾಕ್ಷಿಯಾಯಿತು. ಇಲ್ಲಿ ಅಂಪೈರ್ ನಿರ್ಧಾರ ಹಾಗೂ ರಿಷಭ್ ಪಂತ್ ನಡೆ ಎಷ್ಟು ಸರಿ ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.