dtvkannada

ಮಂಗಳೂರು: ಚರ್ಚ್ ಕಟ್ಟಡದ ಬಾಗಿಲು ಮುರಿದು ಪ್ರಾರ್ಥನಾ ಮಂದಿರಕ್ಕೆ ನುಗ್ಗಿರುವ ಕಿಡಿಗೇಡಿಗಳು ಶಿಲುಬೆಗೆ ಹಾನಿ ಮಾಡಿ, ಹಿಂದೂ ದೇವರಾದ ಅನುಮಂತನ ಫೋಟೋ ಅಲ್ಲಿ ಇಟ್ಟು, ಕೆಲವಸ್ತುಗಳನ್ನು ಹಾನಿ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಪೇರಡ್ಕ ಬಳಿ ನಡೆದಿದೆ. ಘಟನೆ ಸಂಬಂಧ ಪಾದ್ರಿ ಜೋಸ್ ವರ್ಗೀಸ್‌ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಇಮ್ಯಾನುವೆಲ್ ಅಸೆಂಬ್ಲಿ ಆಫ್‌ ಗಾಡ್‌ ಹೆಸರಿನ ಕ್ರೈಸ್ತ ಪ್ರಾರ್ಥನಾ ಮಂದಿರದ ಬಾಗಿಲು ಒಡೆದು ಅಕ್ರಮ ಪ್ರವೇಶ ಮಾಡಿದ ಕಿಡಿಗೇಡಿಗಳು, ಶಿಲುಬೆಗೆ ಹಾನಿ ಮಾಡಿದ್ದಾರೆ. ನಂತರ ಸ್ಥಳದಲ್ಲಿ ಭಗವಾಧ್ವಜ ಹಾರಿಸಿ, ಹನುಮಂತನ ಫೋಟೋ ಇರಿಸಿದ್ದಾರೆ. ಪ್ರಾರ್ಥನಾ ಮಂದಿರದ ದಾಖಲೆಗಳನ್ನು ಸಂಗ್ರಹಿಸಿದ್ದ ಗೋದ್ರೇಜ್ ಬೀರುವಿಗೂ ಹಾನಿ ಮಾಡಿದ್ದಾರೆ. ಕಿಡಿಗೇಡಿಗಳ ದಾಂದಲೆ ವಿರುದ್ಧ ಪ್ರಾರ್ಥನಾ ಮಂದಿರದ ಪಾದ್ರಿ ಫಾದರ್ ಜೋಸ್‌ ವರ್ಗಿಸ್​ ದೂರು ನೀಡಿದ್ದಾರೆ.
ಈ ಕಟ್ಟಡಕ್ಕೆ ಕಳೆದ 30 ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ. ಇದು ಅಧಿಕೃತ ಪ್ರಾರ್ಥನಾ ಮಂದಿರ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿದ್ದ ಪ್ರಾರ್ಥನಾ ಮಂದಿರದ ದುರಸ್ತಿ ಕಾಮಗಾರಿಗಳು ನಡೆಯುತ್ತಿದ್ದವು. ಈ ವೇಳೆ ದುಷ್ಕರ್ಮಿಗಳು ಪ್ರಾರ್ಥನಾಲಯ ಪ್ರವೇಶಿಸಿ, ಕೇಸರಿ ಧ್ವಜ ಹಾರಿಸಿ, ಹನುಮಂತನ ಫೋಟೊ ಇರಿಸಿ, ದೀಪ ಹಚ್ಚಿದ್ದರು. ಈ ಸ್ಥಳವನ್ನು ಬಾಡಿಗೆಗೆ ವ್ಯಕ್ತಿಯೊಬ್ಬರಿಗೆ ನೀಡಲಾಗಿತ್ತು. ಅವರು ಅಲ್ಲಿ ಕ್ರಿಶ್ಚಿಯನ್ನರ ಸ್ಮಶಾನ ನಿರ್ಮಿಸಲು ಮುಂದಾದರು. ಈ ವೇಳೆ ಸ್ಥಳೀಯರ ವಿರೋಧ ವ್ಯಕ್ತವಾಗಿದ್ದರಿಂದ ನಂತರದ ದಿನಗಳಲ್ಲಿ ಪ್ರಾರ್ಥನಾ ಮಂದಿರವಾಗಿ ರೂಪಿಸಲಾಯಿತು ಎಂದು ದೂರಿದ್ದಾರೆ.

ಸ್ಥಳಕ್ಕೆ ಹಿಂದೂಪರ ಸಂಘಟನೆಗಳ ಪ್ರಮುಖರು ಭೇಟಿ ನೀಡಿ, ಪ್ರಾರ್ಥನಾ ಮಂದಿರದ ಜಾಗ ಖಾಸಗಿ ವ್ಯಕ್ತಿಗೆ ಸೇರಿದೆ. ಈ ಸ್ಥಳದಿಂದ ತಕ್ಷಣ ಪ್ರಾರ್ಥನಾ ಮಂದಿರ ತೆರವುಗೊಳಿಸಬೇಕು, ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

By dtv

Leave a Reply

Your email address will not be published. Required fields are marked *

error: Content is protected !!