ಉಡುಪಿ: ಇಲ್ಲಿನ ಪ್ರಮುಖ ಪ್ರವಾಸಿ ತಾಣವಾದ ಮಲ್ಪೆಯ ಬೀಚ್ ನಲ್ಲಿ ನಿರ್ಮಿಸಲಾಗಿದ್ದ ತೇಲುವ ಸೇತುವೆ ಉದ್ಘಾಟನೆಗೊಂಡು ವಾರದ ಒಳಗೆ ಕಡಲಿನ ಅಬ್ಬರಕ್ಕೆ ಹಾನಿಗೊಂಡಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸೇತುವೆಯ ಲಾಕ್ ತೆಗೆಯುವ ವೇಳೆ ಸೇತುವೆಯ ಭಾಗಗಳು ಕಳಚಿಕೊಂಡಿವೆ ಎಂದು ತಿಳಿದು ಬಂದಿವೆ. ಇದೀಗ ವಿಡಿಯೋ ವೈರಲ್ ಆಗಿದೆ.
ಶುಕ್ರವಾರವಷ್ಟೇ ಉದ್ಘಾಟನೆಗೊಂಡಿರುವ ನೂತನ ‘ಅಲೆಗಳಲ್ಲಿ ತೇಲುವ ಸೇತುವೆ’ಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರೂ ಅವಕಾಶ ನೀಡಿರಲಿಲ್ಲ. ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಸುರಕ್ಷೆಯ ದೃಷ್ಟಿಯಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ಸ್ವಯಂಸೇವಕರು ಕಟ್ಟೆಚ್ಚರ ವಹಿಸಿದ್ದರು. ಇಲ್ಲಿನ ಜೀವ ರಕ್ಷಕ ತಂಡ ಎಲ್ಲರ ಮೇಲೂ ನಿಗಾ ಇರಿಸಿ, ನೀರಿಗಿಳಿಯಲು ನಿಷೇಧ ಹೇರಿತ್ತು.
ಕಡಲಬ್ಬರದ ಹಿನ್ನೆಲೆಯಲ್ಲಿ ವಾಟರ್ ಸ್ಪೋರ್ಟ್ಸ್ ನಿನ್ನೆ ಬಂದ್ ಮಾಡಲಾಗಿತ್ತು. ಸಮುದ್ರದ ಅಲೆಗಳ ಒತ್ತಡ ಬೆಳಗ್ಗಿನಿಂದಲೇ ಹೆಚ್ಚು ಕಂಡುಬಂದಿದ್ದು, ರವಿವಾರ ಮಧ್ಯಾಹ್ನದ ಬಳಿಕ ಗಾಳಿಯ ವೇಗಕ್ಕೆ ಅಲೆಗಳು ತೀವ್ರತೆ ಪಡೆದುಕೊಂಡಿದ್ದವು. ಹಾಗಾಗಿ ಮಲ್ಪೆ ಬೀಚ್‌ನಲ್ಲಿ ಅಪರಾಹ್ನ 4ರ ಬಳಿಕ ಯಾವುದೇ ವಾಟರ್ ಸ್ಪೋರ್ಟ್ಸ್ ನಡೆಸಲು ಆವಕಾಶ ನೀಡಲಿಲ್ಲ.
ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹಕಾರದಲ್ಲಿ ರಾಜ್ಯದಲ್ಲೇ ಪ್ರಥಮ ಎಂಬಂತೆ ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ ನಿರ್ಮಾಣವಾಗಿತ್ತು. ನಿರ್ಮಾಣ ಕಾಮಗಾರಿಗೆ ಸುಮಾರು 80 ಲಕ್ಷ ರೂ ವ್ಯಯಿಸಲಾಗಿತ್ತು. ಇದೀಗ ಸೇತುವೆ ಪೂರ್ತಿ ಹಾನಿಯಾಗಿದೆ.
ಏಕಾಏಕಿ ಸಮುದ್ರದ ಅಬ್ಬರ ಕಾಣಿಸಿಕೊಂಡ ಕಾರಣ ಸೇತುವೆಯನ್ನು ಕಳಚಲು ಸಾಧ್ಯವಾಗಲಿಲ್ಲ.ತೇಲುವ ಸೇತುವೆ ಮತ್ತೆ ಸುರಕ್ಷಿತವಾಗಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿದು ಬಂದಿದೆ. ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಮತ್ತೆ ಕಾರ್ಯಾರಂಭ ಮಾಡಲಿದೆ. ಸುರಕ್ಷತೆ ಮತ್ತು ಲೈಫ್ ಜಾಕೆಟ್ ಧರಿಸಿದ ಬಳಿಕವೇ ಸೇತುವೆಯಲ್ಲಿ ನಡೆಯಲು ಅವಕಾಶ ನೀಡಲಾಗುತ್ತದೆ ಎಂದು ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ಹೇಳಿದ್ದಾರೆ.
ಸೈಕ್ಲೋನ್ ಎಫೆಕ್ಟ್ ಮತ್ತು ಭಾರೀ ಗಾಳಿಯಿಂದಾಗಿ ತೇಲುವ ಸೇತುವೆಗೆ ಯಾವುದೇ ಹಾನಿಯಾಗದಂತೆ ನಾವು ಸೇತುವೆಯ ಲಾಕ್ ಳನ್ನು ಸಂಪರ್ಕ ಕಡಿತಗೊಳಿಸಿದ್ದೇವೆ. ಇದರಿಂದಾಗಿ ಇಂದು ಬೆಳಗ್ಗೆ ಸೇತುವೆಯ ಕೆಲವು ಬ್ಲಾಕ್‌ಗಳು ಸಮುದ್ರದಲ್ಲಿ ತೇಲುತ್ತಿದ್ದವು. ಸಾವು-ನೋವು ಸಂಭವಿಸಿದೆ ಎಂದು ಜನರು ವದಂತಿ ಹಬ್ಬಿದ್ದಾರೆ. ಯಾವುದೇ ಪ್ರಾಣಹಾನಿಯಾಗಿಲ್ಲ ಅಥವಾ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ನಾವು ಬಲವಾಗಿ ದೃಢೀಕರಿಸುತ್ತೇವೆ. ಪ್ರಸ್ತುತ ತೇಲುವ ಸೇತುವೆಯನ್ನು ಮುಚ್ಚಲಾಗಿದೆ ಏಕೆಂದರೆ ಯಾವುದೇ ಜಲಕ್ರೀಡೆ ಚಟುವಟಿಕೆಗಳನ್ನು ಕೆಲ ಕಾಲ ನಿಲ್ಲಿಸಲು ಆಡಳಿತದಿಂದ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.