ಬೀಜಿಂಗ್: ಪ್ರಯಾಣಿಕರಿದ್ದ ವಿಮಾನವೊಂದು ಟೇಕಾಫ್ ಆಗುವ ಸಂದರ್ಭದಲ್ಲಿ ರನ್ವೇಯಿಂದ ಸ್ಕಿಡ್ ಆಗಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಚೀನಾದ ನೈರುತ್ಯ ಚಾಂಗ್ಕಿಂಗ್ ನಗರದಲ್ಲಿ ಇಂದು ನಡೆದಿದೆ.

ಟಿಬೆಟ್ ಏರ್‌ಲೈನ್ಸ್ಗೆ ಸಂಬಂಧಿಸಿದ ಪ್ರಯಾಣಿಕರಿದ್ದ ವಿಮಾನ ಅವಘಡಕ್ಕೀಡಾಗಿದ್ದು, 25 ಮಂದಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.
ಟಿಬೆಟ್ ಏರ್‌ಲೈನ್ಸ್ ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರಿರುವ ವಿಮಾನದ ಮುಖ್ಯಭಾಗದಲ್ಲಿ ಬೆಂಕಿಯ ಜ್ವಾಲೆ ಮತ್ತು ದಟ್ಟ ಕಪ್ಪು ಹೊಗೆ ಕಾಣಿಸಿಕೊಂಡಿರುವ ವೀಡಿಯೋ ಬಹಿರಂಗವಾಗಿದೆ.
ವಿಮಾನದ ಹಿಂದಿನ ಬಾಗಿಲಿನ ಮೂಲಕ ಜನರು ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯಗಳನ್ನು ವೀಡಿಯೋದಲ್ಲಿ ನೋಡಬಹುದು. ವಿಮಾನಕ್ಕೆ ಆವರಿಸುತ್ತಿದ್ದ ಬೆಂಕಿಯನ್ನು ನಂದಿಸಲಾಗಿದೆ ಮತ್ತು ರನ್‌ವೇಯನ್ನು ಮುಚ್ಚಲಾಗಿದೆ.
ವಿಮಾನವು ಟಿಬೆಟ್‌ನ ನೈಂಗ್‌ಚಿಗೆ ಹೊರಡಬೇಕಿತ್ತು. ಅಪಘಾತಕ್ಕೆ ಕಾರಣವೇನು ಎಂಬ ಕುರಿತು ತನಿಖೆ ನಡೆಯುತ್ತಿದೆಯೆಂದು ತಿಳಿದು ಬಂದಿದೆ.