dtvkannada

ಬೆಂಗಳೂರು: ಮೇ 19ರಂದು ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಈ ಹಿಂದೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೇ 15 ರಂದು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಿತ್ತು. ಆದರೆ ಸಾಲು ಸಾಲು ರಜೆಗಳ ಕಾರಣದಿಂದ ಮೌಲ್ಯಮಾಪನ ಕೊಂಚ ವಿಳಂಭವಾಗಿತ್ತು.

ಇದೀಗ ಮೌಲ್ಯ ಮಾಪನ ಪ್ರಕ್ರಿಯೆ ಮುಗಿದಿದ್ದು, ಮೌಲ್ಯ ಮಾಪನದಲ್ಲಿ ಸಣ್ಣಪುಟ್ಟ ಕೆಲವು ದೋಷಗಳಿದ್ದಲ್ಲಿ ಅವುಗಳನ್ನು ಸರಿಪಡಿಸುವ ಕಾರ್ಯ ನಡೆಸಲಾಗುತ್ತಿದೆ. ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ನಂತರ ಅಂಕಗಳ ದಾಖಲೀಕರಣ ಪೂರ್ಣಗೊಳಿಸಿ ಮೇ 19 ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ 15,387 ಶಾಲೆಗಳಿಂದ 8,73,884 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 4,52,732 ವಿದ್ಯಾರ್ಥಿಗಳು, 4,21,110 ವಿದ್ಯಾರ್ಥಿನಿಯರು ಮತ್ತು 4 ತೃತೀಯ ಲಿಂಗಿ ವಿದ್ಯಾರ್ಥಿಗಳು, ಅಲ್ಲದೆ ವಿಭಿನ್ನ ಸಾಮರ್ಥ್ಯವುಳ್ಳ 5,307 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್:​
ಫಲಿತಾಂಶ ತಡವಾಗಿ ಬರುತ್ತಿದ್ದರೂ ಸಹ ಫಲಿತಾಂಶಕ್ಕಾಗಿ ಕಾಯುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿಯೊಂದಿದೆ. ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟುಅಂಕಗಳ ಕೊರತೆ ಹೊಂದಿರುವವರಿಗೆ ಈ ಬಾರಿಯೂ ಗರಿಷ್ಠ ಮೂರು ವಿಷಯದಲ್ಲಿ ಶೇ.10 ರಷ್ಟು ಗ್ರೇಸ್‌ ಅಂಕ ನೀಡಿ ಪಾಸ್‌ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಗರಿಷ್ಠ ಮೂರು ವಿಷಯಗಳಿಗೆ ಶೇ.5 ರಷ್ಟು ಗ್ರೇಸ್‌ ಅಂಕ ನೀಡುವ ಮಾನದಂಡ ಅನುಸರಿಸಿಕೊಂಡು ಬರಲಾಗುತ್ತಿತ್ತು. ಆದರೆ ಕೋವಿಡ್​ನಿಂದಾಗಿ ಶಾಲೆಗಳು ಆರಂಭವಾಗದೇ ಭೌತಿಕ ತರಗತಿಗಳಿಗೆ ಸರಿಯಾಗಿ ಹಾಜರಾಗಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಇದನ್ನು ಶೇ.5 ರಿಂದ ಶೇ.10ಕ್ಕೆ ಏರಿಕೆ ಮಾಡಲಾಗಿದೆ.

ಫಲಿತಾಂಶ ಇಲ್ಲಿ ನೋಡಿ..
ಫಲಿತಾಂಶ ಘೋಷಿಸಿದ ನಂತರ ವಿದ್ಯಾರ್ಥಿಗಳು sslc.karnataka.gov.in ಮತ್ತು karresults.nic.in. ಈ ವೆಬ್ಸೈಟ್ಗಳಲ್ಲಿ ರಿಸಲ್ಟ್ ಅನ್ನು ಪರಿಶೀಲಿಸಬಹುದು. ಮಾರ್ಕ್ ಶೀಟ್‌ಗಳನ್ನು ಡೌನ್‌ಲೋಡ್ ಮಾಡಲು ಅವರು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಬೇಕಾಗುತ್ತದೆ.

By dtv

Leave a Reply

Your email address will not be published. Required fields are marked *

error: Content is protected !!