ಜಮೈಕಾದ ಮೃಗಾಲಯದಲ್ಲಿ ಸಿಂಹವೊಂದು ಮೃಗಾಲಯದ ಕೆಲಸಗಾರನ ಬೆರಳನ್ನು ಕಚ್ಚಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸೇಂಟ್ ಎಲಿಜಬೆತ್‌ನಲ್ಲಿರುವ ಜಮೈಕಾ ಮೃಗಾಲಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ವೀಡಿಯೊದಲ್ಲಿ, ಮೃಗಾಲಯದ ವ್ಯಕ್ತಿಯೊಬ್ಬ ಸಿಂಹವನ್ನು ಕೀಟಲೆ ಮಾಡುತ್ತಾ, ಪ್ರವಾಸಿಗರಿಗೆ ಮನೋರಂಜನೆ ಮಾಡುತ್ತಾನೆ. ಸಿಂಹವನ್ನು ಪ್ರಚೋದಿಸುತ್ತಾ ಅದರ ಪಂಜರದ ಮೂಲಕ ತನ್ನ ಬೆರಳುಗಳನ್ನು ಅದರ ಬಾಯಿಗೆ ತೋರಿಸುತ್ತಾನೆ. ಸಿಂಹವು ಅವನ ಮೇಲೆ ಘೀಳಿಡುತ್ತಾ ತನ್ನ ಹಲ್ಲುಗಳನ್ನು ತೋರಿಸುತ್ತಿದ್ದರೂ, ಆ ಮನುಷ್ಯನು ಪಂಜರದೊಳಗೆ ತನ್ನ ಕೈ’ಯನ್ನು ಹಾಕುತ್ತಾ ಪ್ರವಾಸಿಗರಿಗೆ ಮನೋರಂಜನೆ ಮಾಡುವುದನ್ನು ಮುಂದುವರೆಸುತ್ತಾನೆ.
ಸಿಂಹ ಇದ್ದ ಗೂಡಿಗೆ ಅಳವಡಿಸಿದ ಕಬ್ಬಿಣದ ನೆಟ್‌ನ ಸೆರೆಯಲ್ಲಿ ಬೆರಳು ತೂರಿಸಿ ಸಿಂಹವನ್ನು ಮುಟ್ಟಲು ತಲೆ ಸವರಲು ಯತ್ನಿಸಿದ್ದಾನೆ. ಈತನ ಉಪಟಳದಿಂದ ಸಿಂಹ ವ್ಯಾಘ್ರಗೊಂಡಿದ್ದು, ಈತನ ಮೇಲೆ ಮುಗಿ ಬೀಳುವ ಯತ್ನ ಮಾಡಿದೆ. ಸಿಂಹ ಕೋಪಗೊಂಡಿದ್ದು ತಿಳಿದರು ಆತ ಮಾತ್ರ ತನ್ನ ಚೆಲ್ಲಾಟವಾಡುವುದನ್ನು ನಿಲ್ಲಿಸದೇ ಪದೇ ಪದೇ ಕಬ್ಬಿಣದ ನೆಟ್ಟೊಳಗೆ ಬೆರಳು ತೂರಿಸಿ ಸಿಂಹವನ್ನು ಮುಟ್ಟಲು ಯತ್ನಿಸಿದ್ದಾನೆ.
ಸುಮ್ಮನಿದ್ದ ತನ್ನನ್ನು ಪದೇ ಪದೇ ಕೆಣಕಿ ಕಿರುಕುಳ ನೀಡುತ್ತಿರುವ ಈತನಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ ಸಿಂಹ ಹೊಂಚು ಹಾಕಿ ಈತನ ಬೆರಳನ್ನು ತನ್ನ ಬಾಯಲ್ಲಿ ಕಚ್ಚಿ ಹಿಡಿದಿದೆ.
ಇದೀಗ ಆ ಅಘಾತಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಪ್ರತ್ಯಕ್ಷದರ್ಶಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸಿದ್ದು, ನಾನು ಮೊದಲು ಅದನ್ನು ತಮಾಷೆ ಎಂದು ಭಾವಿಸಿದೆ. ಅದು ಇಷ್ಟು ಗಂಭೀರವಾಗಿದೆ ಎಂದು ನಾನು ಅಂದುಕೊಂಡಿರಲಿಲ್ಲ. ಆ ಯುವಕ ನೆಲದ ಮೇಲೆ ಬಿದ್ದಾಗ ನಮಗೆ ಭಯವಾಯಿತು. ಆತನ ಕೈಗಳ ಚರ್ಮ ಮತ್ತು ಅವನ ಬೆರಳಿನ ಮೂಳೆ ಮುರಿದುಹೋಗಿದೆ ಎಂದು ಅವರು ಹೇಳಿದ್ದಾರೆ.