dtvkannada

ಅಹಮದಾಬಾದ್‌: ಐಪಿಎಲ್‌ 2022 ಎರಡನೇ ಕ್ವಾಲಿಫೈಯರ್‌–2 ಪಂದ್ಯದಲ್ಲಿ ಜೋಸ್‌ ಬಟ್ಲರ್‌ (106) ಸಿಡಿಸಿದ ಅಮೋಘ ಶತಕದ ಬಲದಿಂದ, ರಾಜಸ್ಥಾನ ರಾಯಲ್ಸ್‌ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 7 ವಿಕೆಟ್‌ ಅಂತರದ ಸುಲಭ ಗೆಲುವು ಸಾಧಿಸಿತು. ಇದರೊಂದಿಗೆ ಈ ಫೈನಲ್‌ಗೆ ಲಗ್ಗೆ ಇಟ್ಟಿತು.

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್‌ ಟೈಟನ್ಸ್‌ ತಂಡ ಈಗಾಗಲೇ ಫೈನಲ್‌ಗೆ ಪ್ರವೇಶಿಸಿದೆ. ಅಂತಿಮ ಹಣಾಹಣಿಯು ಮೇ 29ರಂದು ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಬೆಂಗಳೂರು ತಂಡ ಬಹಳ ಬೇಗನೆ ವಿರಾಟ್‌ ಕೋಹ್ಲಿ ವಿಕೆಟ್‌ ಕಳೆದುಕೊಂಡಿತು. ನಾಯಕ ಫಫ್ ಡುಪ್ಲೆಸಿ 25 ರನ್‌, ಗ್ಲೆನ್ ಮ್ಯಾಕ್ಸ್‌ವೆಲ್ 24 ರನ್‌ಗಳ ಕೊಡುಗೆ ನೀಡಿದರು. ನಂತರ ಬಂದ ಮಹಿಪಾಲ್ ಲೊಮ್ರೊರ್(8), ದಿನೇಶ್‌ ಕಾರ್ತಿಕ್‌(6), ಹರ್ಷಲ್‌ ಪಟೇಲ್‌(1) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ವಣಿಂದು ಹಸರಂಗಾ ಶೂನ್ಯಕ್ಕೆ ಔಟಾದರು. ಶಹಬಾಜ್ ಅಹಮದ್ ಔಟಾಗದೆ 12 ರನ್‌ ಗಳಿಸಿದರು.

20 ಓವರ್‌ ಅಂತ್ಯಕ್ಕೆ ಆರ್‌ಸಿಬಿ 8 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿತು. ರಾಜಸ್ಥಾನ ಪರ ಪ್ರಸಿದ್ಧ ಕೃಷ್ಣ ಮತ್ತು ಒಬೆದ್ ಮೆಕಾಯ್ ತಲಾ 3 ವಿಕೆಟ್‌ ಪಡೆದರು. ಟ್ರೆಂಟ್ ಬೌಲ್ಟ್ ಮತ್ತು  ರವಿಚಂದ್ರ ಅಶ್ವಿನ್‌ ತಲಾ 1 ವಿಕೆಟ್‌ ಪಡೆದರು.

ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 158 ರನ್‍ಗಳ ಸಾಧಾರಣ ಮೊತ್ತವನ್ನು ಆರಂಭದಲ್ಲೇ ಉಡೀಸ್ ಮಾಡುವ ಸೂಚನೆ ನೀಡಿದ ಬಟ್ಲರ್ ಅಜೇಯ 106 ರನ್‌ (60 ಎಸೆತ, 10 ಬೌಂಡರಿ, 6 ಸಿಕ್ಸ್‌) ಚಚ್ಚಿ ಆರಂಭದಿಂದ ಕೊನೆಯವರೆಗೆ ಹೋರಾಡಿ ರಾಜಸ್ಥಾನಕ್ಕೆ 18.1 ಓವರ್‌ಗಳ ಅಂತ್ಯಕ್ಕೆ 161 ರನ್‌ ಸಿಡಿಸಿ ಇನ್ನೂ 11 ಎಸೆತ ಬಾಕಿ ಇರುವಂತೆ 7 ವಿಕೆಟ್‌ಗಳ ಅಂತರದ ಗೆಲುವು ತಂದು ಕೊಟ್ಟರು. ಈ ಮೂಲಕ ಸುಲಭವಾಗಿ ಫೈನಲ್‍ಗೆ ದಾರಿ ತೋರಿಸಿದರು. ಇತ್ತ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಲು ವಿಫಲವಾದ ಆರ್‌ಸಿಬಿ ಅಭಿಮಾನಿಗಳ ಕಪ್ ಗೆಲ್ಲುವ ಆಸೆಗೆ ಈ ಬಾರಿಯೂ ತಣ್ಣೀರೆರಚಿದೆ.

ರಾಜಸ್ಥಾನ ಪರ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಬಟ್ಲರ್ ಆರ್‌ಸಿಬಿ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಜೊತೆಗೆ ಮೊದಲ ವಿಕೆಟ್‍ಗೆ 61 ರನ್ (31 ಎಸೆತ) ಸಿಡಿಸಿ ಈ ಜೋಡಿ ಬೇರ್ಪಟ್ಟಿತು. ಜೈಸ್ವಾಲ್ 21 ರನ್ (13 ಎಸೆತ, 1 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ಬಳಿಕ ಸಂಜು ಸ್ಯಾಮ್ಸನ್ 23 ರನ್ (21 ಎಸೆತ, 1 ಬೌಂಡರಿ, 2 ಸಿಕ್ಸ್) ಬಾರಿಸಿ ಹಸರಂಗಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಮೊದಲು ಬಟ್ಲರ್ ಜೊತೆ 52 ರನ್ (39 ಎಸೆತ) ಜೊತೆಯಾಟವಾಡಿ ತಂಡದ ಗೆಲುವಿಗೆ ನೆರವಾದರು.

ಪಾಟಿದರ್ ಏಕಾಂಗಿ ಹೋರಾಟ:
ಕಳೆದ ಪಂದ್ಯದ ಮುಂದುವರಿದ ಭಾಗದಂತೆ ಪಾಟಿದರ್ ಬ್ಯಾಟಿಂಗ್ ಸೊಗಸಾಗಿತ್ತು. ಆಗೊಮ್ಮೆ ಈಗೊಮ್ಮೆ ಬೌಂಡರಿ, ಸಿಕ್ಸರ್ ಸಿಡಿಸುತ್ತ ರಾಜಸ್ಥಾನ ಬೌಲರ್‌ಗಳಿಗೆ ಭಯ ಹುಟ್ಟಿಸಿದರು. ಆದರೆ ಇನ್ನೊಂದೆಡೆ ವಿಕೆಟ್ ಕಳೆದುಕೊಂಡು ಸಾಗಿದ ಆರ್​ಸಿಬಿ ತಂಡಕ್ಕೆ ಮ್ಯಾಕ್ಸ್‌ವೆಲ್ 24 ರನ್ (13 ಎಸೆತ, 1 ಬೌಂಡರಿ, 3 ಸಿಕ್ಸ್) ಬಾರಿಸಿ ಮಧ್ಯಮ ಕ್ರಮಾಂಕದಲ್ಲಿ ವೇಗವಾಗಿ ರನ್ ಹೆಚ್ಚಿಸುವ ಸಾಹಸಕ್ಕೆ ಕೈಹಾಕಿ ವಿಕೆಟ್ ಕೈಚೆಲ್ಲಿಕೊಂಡರು.

ಅಂತಿಮವಾಗಿ ಪಾಟಿದರ್ ಕೂಡ 58 ರನ್ (42 ಎಸೆತ, 4 ಬೌಂಡರಿ, 3 ಸಿಕ್ಸ್) ಚಚ್ಚಿ ಬಟ್ಲರ್ ಹಿಡಿದ ಅದ್ಭುತ ಕ್ಯಾಚ್‍ಗೆ ಬಲಿಯಾದರು. ಕೊನೆಯಲ್ಲಿ ಶಹಬಾಜ್ ಅಹಮದ್ ಅಜೇಯ 12 ರನ್ (8 ಎಸೆತ, 1 ಬೌಂಡರಿ, 1 ಸಿಕ್ಸ್) ನೆರವಿನಿಂದ ಆರ್‌ಸಿಬಿ ತಂಡ 8 ವಿಕೆಟ್ ಕಳೆದುಕೊಂಡು 157 ರನ್ ಬಾರಿಸಿತು.

ಪ್ರಸಿದ್ಧ್ ಕೃಷ್ಣ, ಮೆಕಾಯ್ ಮಾರಕ ದಾಳಿ:
ಆರ್‌ಸಿಬಿ ತಂಡದ ಅಗ್ರ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ಗಳಾದ ಕೊಹ್ಲಿ, ದಿನೇಶ್ ಕಾರ್ತಿಕ್ ಮತ್ತು ಹಸರಂಗ ವಿಕೆಟ್‍ನ್ನು ಪ್ರಸಿದ್ಧ್ ಕೃಷ್ಣ ಕಿತ್ತರೆ, ಡುಪ್ಲೆಸಿಸ್, ಮಹಿಪಾಲ್ ಲೋಮ್ರೋರ್ ಮತ್ತು ಹರ್ಷಲ್ ಪಟೇಲ್ ವಿಕೆಟ್ ಕಿತ್ತು ಮೆಕಾಯ್ ಆರ್‌ಸಿಬಿ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಇವರಿಬ್ಬರೂ ತಲಾ 3 ವಿಕೆಟ್ ಕಿತ್ತರೆ, ಉಳಿದ 2 ವಿಕೆಟ್‍ಗಳನ್ನು ಬೌಲ್ಟ್ ಮತ್ತು ಅಶ್ವಿನ್ ತಲಾ ಒಂದೊಂದರಂತೆ ಹಂಚಿಕೊಂಡರು.

By dtv

Leave a Reply

Your email address will not be published. Required fields are marked *

error: Content is protected !!