dtvkannada

ಸುಳ್ಯ: ಖಾಸಗೀ ಶಾಲೆಯಲ್ಲಿದ್ದ ಬಿಸಿಯೂಟದ ಹಳೆಯ ಕೊಳೆತ ಅಕ್ಕಿಯನ್ನು ಪಡಿತರ ಕೇಂದ್ರಕ್ಕೆ ಸಾಗಿಸಿ ಅಲ್ಲಿಂದ ಒಳ್ಳೆಯ ಅಕ್ಕಿಯನ್ನು ಶಾಲೆಗೆ ಸಾಗಿಸಲು ಯತ್ನಿಸಿ, ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರ್ ನಲ್ಲಿ ನಡೆದಿದೆ

ಜಾಲ್ಸೂರು ಗ್ರಾಮದ ಅಡ್ಕಾರ್ ವಿನೋಬಾ ನಗರ ವಿವೇಕಾನಂದ ಖಾಸಗಿ ಶಾಲೆಯಲ್ಲಿದ್ದ ಮಕ್ಕಳ ಬಿಸಿಯೂಟದ ಕೊಳೆತ ಅಕ್ಕಿಯನ್ನು, ಸೊಸೈಟಿ ಮೂಲಕ ಹೊಸ ಅಕ್ಕಿಯೊಂದಿಗೆ ಪರಸ್ಪರ ಬದಲಾಯಿಸಿಕೊಳ್ಳುತ್ತಿದ್ದಾಗ ಸಾರ್ವಜನಿಕರು ತಡೆದಿದ್ದಾರೆ. ಸೊಸೈಟಿಯ ಮೂಲಕ ಗ್ರಾಮಸ್ತರಿಗೆ ಹುಳುಕು ಅಕ್ಕಿಯನ್ನು ವಿತರಿಸಲು ಯತ್ನಿಸಿದ ಶಾಲಾ ಆಡಳಿತ ಮಂಡಳಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಕ್ಕಿ ಮೂಟೆಗಳನ್ನು ಕಳ್ಳಸಾಗಾಣಿಕೆಯ ಸಂದರ್ಭದಲ್ಲಿ ಅದೇ ಶಾಲೆಯ ವಿದ್ಯಾರ್ಥಿಗಳನ್ನು ಮೂಟೆ ಎತ್ತಲು ಬಳಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ ಎಸ್’ಡಿಪಿಐ:
ಜಾಲ್ಸೂರಿನ ವಿನೋಬಾ ನಗರ ವಿವೇಕಾನಂದ ಖಾಸಗಿ ಶಾಲೆಯಲ್ಲಿದ್ದ ಬಿಸಿಯೂಟದ ಹಳೆಯ ಕೊಳೆತ ಅಕ್ಕಿಯನ್ನು ಪಡಿತರ ಕೇಂದ್ರಕ್ಕೆ ಸಾಗಿಸಿ ಅಲ್ಲಿಂದ ಒಳ್ಳೆಯ ಅಕ್ಕಿಯನ್ನು ಶಾಲೆಗೆ ಸಾಗಿಸಲು ಯತ್ನಿಸಿದ ಘಟನೆಯೂ ಖಂಡನಾರ್ಹ, ಸಂಬಂದ ಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ಜಾಲ್ಸೂರು ಬೂತ್ ಸಮಿತಿ ಕಾರ್ಯದರ್ಶಿ ಹಾರಿಸ್ ಕದಿಕಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ಕಿ ಕೊಳೆತರೆ ಅಥವಾ ಬಳಸಲು ಅಯೋಗ್ಯವಾದರೆ ಅದನ್ನು ಬಿಸಾಡುವುದು ಅನಿವಾರ್ಯ, ಅದು ಬಿಟ್ಟು ಅದನ್ನು ಶಾಲಾ ಮಕ್ಕಳಿಗಾಗಲಿ ಅಥವಾ ಗ್ರಾಮಸ್ಥರಿಗಾಗಲಿ ವಿತರಣೆ ಮಾಡುವುದು ತಪ್ಪು. ಈ ರೀತಿಯಾಗಿ ಪಡಿತರ ಅಂಗಡಿಯಿಂದ ಅದಲು ಬದಲಾವಣೆ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಹಾಗೂ ಅಕ್ಕಿ ಈ ರೀತಿಯಲ್ಲಿ ಕೊಳೆಯುವಷ್ಟು ಸಮಯ ದಾಸ್ತಾನು ಇಡಲು ಕಾರಣವೇನು ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಅದಲ್ಲದೇ ಅಕ್ಕಿಯನ್ನು ವಾಹನಕ್ಕೆ ತುಂಬಿಸಲು ಮತ್ತು ಕೆಳಗಿಳಿಸಲು ಅಪ್ರಾಪ್ತ ಶಾಲಾ ಮಕ್ಕಳನ್ನು ಬಳಸಿರುವುದು ಬಾಲ ಕಾರ್ಮಿಕ ಕಾನೂನಿನಡಿಯಲ್ಲಿ ಇನ್ನೊಂದು ದೊಡ್ಡ ತಪ್ಪು ಹಾಗೂ ಎಳೆಯ ಮಕ್ಕಳ ಮನಸ್ಸಿನಲ್ಲೂ ಈ ರೀತಿಯ ವಂಚನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ. ಈ ಹಿಂದೆಯೂ ಈ ರೀತಿಯ ಘಟನೆ ನಡೆದಿರುವ ಸಾಧ್ಯತೆ ಗಳಿವೆ, ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!