ಪುತ್ತೂರು: ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ವತಿಯಿಂದ ಜಿಲ್ಲಾ ಪಂಚಾಯತ್ ಚುನಾವಣಾ ಪ್ರಯುಕ್ತ ಆರ್ಯಾಪುವಿನಲ್ಲಿ ಹಮ್ಮಿಕೊಂಡ “ಹಸ್ತಲಾಘವ” ಕಾರ್ಯಕ್ರಮ ನಡೆಸದಂದೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ, ಯುವ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪದಚ್ಯುತಿಗೊಳಿಸಲು ಯುವಕಾಂಗ್ರೆಸ್ ಕೆಪಿಸಿಸಿ ಹಾಗು ರಾಜ್ಯಮಟ್ಟದ ನಾಯಕರಿಗೆ ಪತ್ರ ಬರೆದಿದೆ.
ಯುವ ಕಾಂಗ್ರೆಸ್ ವತಿಯಿಂದ ಇದೇ 26ರಂದು ಆರ್ಯಾಪುವಿನಲ್ಲಿ ಹಸ್ತಲಾಘವ ಕಾರ್ಯಕ್ರಮ ಮಾಡುವ ಕುರಿತು ಬ್ಲಾಕ್ ಅಧ್ಯಕ್ಷರಿಂದ ಅನುಮತಿ ಪಡೆದು ಕಾರ್ಯಕ್ರಮಕ್ಕೆ ಬೇಕಾದ ತಯಾರಿಯನ್ನೂ ಯುವ ಕಾಂಗ್ರೆಸ್ ಪದಾದಿಕಾರಿಗಳು ಮಾಡಿಕೊಂಡಿದ್ದರು. ಜೊತೆಗೆ ಕಾರ್ಯಕ್ರಮಕ್ಕೆ ಗಣ್ಯರನ್ನೂ ಆಹ್ವಾನ ಮಾಡಲಾಗಿತ್ತು. ಆದರೆ ಇಂದು, ಹಿರಿಯ ಕಾಂಗ್ರೆಸ್ಸಿಗರ ಕಾರ್ಯಕ್ರಮವನ್ನು ಯುವಕಾಂಗ್ರೆಸ್ ಮಾಡುವಂತಿಲ್ಲ ಎಂಬ ಕಾರಣ ನೀಡಿ ಪಕ್ಷದ ಕಾರ್ಯಕ್ರಮಕ್ಕೆ ಪಕ್ಷದ ಬ್ಲಾಕ್ ಅಧ್ಯಕ್ಷರೇ ನೋಟಿಸ್ ಜಾರಿಗೊಳಿಸಿದ್ದಾರೆ.
ಇದೀಗ ಯುವಕಾಂಗ್ರೆಸ್ ಕಾರ್ಯಕ್ರಮಕ್ಕೆ ತಡೆಯೊಡ್ಡಿ ಕಾರ್ಯಕ್ರಮ ನಡೆಸದಂತೆ ಪಕ್ಷದ ಕಾರ್ಯಕ್ರಮದ ವಿರುದ್ಧವೇ ನೋಟಿಸ್ ಜಾರಿಗೊಳಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪದಚ್ಯುತಿಗೊಳಿಸಬೇಕೆಂದು ಯುವಕಾಂಗ್ರೆಸ್ ಉಪಾಧ್ಯಕ್ಷ ಹನೀಫ್ ಪುಂಚತ್ತಾರ್ ರವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ನಲಪಾಡ್, ಬಿವಿ ಶ್ರೀನಿವಾಸ್ ಸೇರಿದಂತೆ ಉನ್ನತ ನಾಯಕರಿಗೆ ಪತ್ರ ಬರೆದಿದ್ದಾರೆ.
ಪುತ್ತೂರು ಕಾಂಗ್ರೆಸ್ಸಿನ ಯುವ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ನಡುವಿನ ಶೀತಲ ಸಮರ ಬೀದಿಗೆ ಬಿದ್ದರೂ ಜಿಲ್ಲಾ ಕಾಂಗ್ರೆಸ್ ಮಾತ್ರ ತಮಗೂ ಇದಕ್ಕೂ ಸಂಭಂದವಿಲ್ಲದಂತೆ ವರ್ತಿಸುತ್ತಿರುವುದು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.