ಕೋಟಾ (ರಾಜಸ್ಥಾನ): ಏಳು ವರ್ಷದ ಬಾಲಕನೊಬ್ಬ ಹಚ್ಚಿದ್ದ ಬೆಂಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 14 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕಳವಳಕಾರಿ ಘಟನೆ ನಡೆದಿದೆ.
ಕೋಟಾದ ಎಂಬಿಎಸ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಶೇ.60 ರಷ್ಟು ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವಿಶಾಲ್ (14) ಬುಧವಾರ ಮೃತಪಟ್ಟಿದ್ದಾನೆ ಎಂದು ಉದ್ಯೋಗ್ ನಗರ ಸರ್ಕಲ್ ಇನ್ಸ್‌ಪೆಕ್ಟರ್ ಮನೋಜ್ ಸಿಂಗ್ ಸಿಕರ್ವಾಲ್ ತಿಳಿಸಿದ್ದಾರೆ.
ಮೇ 13 ರಂದು ತನ್ನ ಮತ್ತು 7 ವರ್ಷದ ಬಾಲಕನ ನಡುವೆ ವಾಗ್ವಾದ ನಡೆಯಿತ್ತು. ನಂತರ ಏಳು ವರ್ಷದ ಬಾಲಕ ಕೋಪದ ಭರದಲ್ಲಿ ತನ್ನ ತಂದೆಯ ಆಟೋ ರಿಕ್ಷಾದಿಂದ ತಂದಿದ್ದ ಡೀಸೆಲ್ ಅನ್ನು ಸುರಿದು ಬೆಂಕಿ ಹಚ್ಚಿದ್ದ.
ಘಟನೆಯಲ್ಲಿ ಶೇ.60 ರಷ್ಟು ಸುಟ್ಟು ಗಂಭೀರ ಗಾಯಗೊಂಡಿದ್ದ ಹುಡುಗನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಘಟನೆಯ ನಂತರ, ಆರೋಪಿ ಬಾಲಕನೊಂದಿಗೆ ಕುಟುಂಬವು ಮಧ್ಯಪ್ರದೇಶದ ಶಿಯೋಪುರದ ತಮ್ಮ ಸ್ಥಳೀಯ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಬುಧವಾರ ಕೊಲೆ ಪ್ರಕರಣ ದಾಖಲಾಗಿದ್ದು, ಬಾಲಕ ಇನ್ನೂ ತನ್ನ ಕುಟುಂಬದೊಂದಿಗೆ ಇದ್ದಾನೆ ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.