ಅವರು ಬೈಕ್ ಕಳ್ಳತನದ ಪ್ಲ್ಯಾನ್ ಮಾಡಿದ್ದರು… ಆದರೆ, ತಮ್ಮ ಈ ಪಾಪ ಕೃತ್ಯಕ್ಕೆ ಅರೆಕ್ಷಣದಲ್ಲಿ ತಕ್ಕ ಶಾಸ್ತಿಯಾಗುತ್ತದೆ ಎಂಬುದನ್ನು ಇವರು ಊಹಿಸಿರಲಿಕ್ಕಿಲ್ಲ…! ಯಾಕೆಂದರೆ, ಕದ್ದು ಓಡಲು ಪ್ಲ್ಯಾನ್ ಮಾಡಿದ್ದ ಈ ಚೋರರು ಅರೆಕ್ಷಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು…!
ಮಾಡಿದ ಪಾಪ ಕಾಡದೇ ಇರುವುದೇ…? ಪಾಪ ಕೃತ್ಯಗಳನ್ನು ಮಾಡಿ ಎಷ್ಟು ದಿನ ಅಂತ ತಪ್ಪಿಸಿಕೊಂಡು ಓಡಲು ಸಾಧ್ಯ…? ಯಾವತ್ತಾದರೂ ಒಂದು ದಿನ ಸಿಕ್ಕಿಬೀಳಲೇಬೇಕು. ಯಾಕೆಂದರೆ, ಪಾಪಕೃತ್ಯ ಮಾಡಿದವರಿಗೆ ಅದೃಷ್ಟ ಎಲ್ಲಾ ಸಂದರ್ಭದಲ್ಲಿ ಕೈ ಹಿಡಿಯುವುದೇ ಇಲ್ಲ. ಇದು ಕೂಡಾ ಅಂತಹದ್ದೇ ದೃಶ್ಯ. ಇಲ್ಲಿ ಚೋರರಿಬ್ಬರು ಸಿಕ್ಕಿಬಿದ್ದ ದೃಶ್ಯವೇ ರೋಚಕ…
ಪಿಸ್ತೂಲ್ ತೋರಿಸಿ ಬೈಕ್ ಕಳ್ಳತನಕ್ಕೆ ಮುಂದಾಗಿದ್ದ ಇಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದ ಈ ಕ್ಷಣವನ್ನು ನೋಡುವಾಗಲೇ ಸಮಾಧಾನದ ಭಾವ ಮೂಡುತ್ತದೆ. ರಸ್ತೆ ಬದಿಯಲ್ಲಿ ಚಾಟ್ಸ್ ತಿನ್ನಲು ಕಾಯುತ್ತಿರುವವರ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ವೇಳೆ, ಅಲ್ಲಿಗೆ ಪಿಸ್ತೂಲ್ ಹಿಡಿದು ಇಬ್ಬರು ಎಂಟ್ರಿ ಕೊಡುತ್ತಾರೆ. ಬಳಿಕ ಅಲ್ಲಿದ್ದ ವ್ಯಕ್ತಿಯ ಬಳಿ ಬಂದ ಕಳ್ಳ ಪಿಸ್ತೂಲ್ ತೋರಿಸಿ ಬೈಕ್ ಕೀ ಪಡೆಯುತ್ತಾನೆ. ಹೀಗೆ ಪಡೆದ ಬೈಕ್ ಕೀಯನ್ನು ತನ್ನ ಜೊತೆಗಾರನಿಗೆ ಕೊಡುತ್ತಾನೆ. ಈ ಕೀ ಹಿಡಿದುಕೊಂಡ ಇನ್ನೋರ್ವ ಚೋರ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆಯೇ ಪಿಸ್ತೂಲ್ ಹಿಡಿದಿದ್ದ ಭೂಪ ಗುಂಡು ಹಾರಿಸುವುದು ಕೂಡಾ ಕಾಣಿಸುತ್ತದೆ.
ಈ ಚೋರರ ಕೃತ್ಯದಿಂದ ಅಲ್ಲಿದ್ದವರು ಕೂಡಾ ಭಯದಲ್ಲಿ ಓಡಿದ್ದರು. ಹೀಗೆ ಇವರಿಬ್ಬರು ಅಂದುಕೊಂಡಂತೆ ಒಂದು ಹಂತದ ವರೆಗೆ ಸರಿಯಾಗಿಯೇ ನಡೆದಿತ್ತು. ಆದರೆ, ಬೈಕ್‌ನೊಂದಿಗೆ ಎಸ್ಕೇಪ್ ಆಗುವ ಎನ್ನುವಷ್ಟರಲ್ಲಿ ಅಲ್ಲಿ ಸೀನ್ ಸಂಪೂರ್ಣ ಬದಲಾಗಿ ಹೋಗಿತ್ತು. ಯಾಕೆಂದರೆ, ಅಲ್ಲಿಗೆ ಪೊಲೀಸ್ ವಾಹನ ಎಂಟ್ರಿ ಕೊಟ್ಟಿತ್ತು. ಹೀಗಾಗಿ, ಭಯದಲ್ಲಿ ಓಡಲು ಯತ್ನಿಸಿದ ಇಬ್ಬರು ಬ್ಯಾಲೆನ್ಸ್ ತಪ್ಪಿ ಬೈಕ್‌ನಿಂದ ಬಿದ್ದಿದ್ದರು. ಪೊಲೀಸರು ತಕ್ಷಣ ಈ ಇಬ್ಬರ ಕೈಗೆ ಕೋಳ ತೊಡಿಸಿದ್ದರು. ಈ ಅಷ್ಟೂ ಸನ್ನಿವೇಶ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.