ಲಕ್ನೋ: ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪತ್ನಿಗೆ ಕಿಸ್ (ಮುತ್ತು) ಕೊಟ್ಟ ಪತಿಯನ್ನು ನೀರಿನಿಂದ ಹೊರಗೆಳೆದು ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಹೆಂಡತಿಗೆ ಮುತ್ತು ಕೊಟ್ಟ ಪತಿಯನ್ನು ವ್ಯಕ್ತಿಯೊಬ್ಬ ಪ್ರಶ್ನಿಸಿ, ನದಿಯಲ್ಲಿದ್ದ ಆತನನ್ನು ಎಳೆದೊಯ್ದು, ಸುತ್ತಮುತ್ತಲಿದ್ದ ಹಲವಾರು ಮಂದಿ ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಅಷ್ಟೇ ಅಲ್ಲ, ಅಯೋಧ್ಯೆಯಲ್ಲಿ ಇಂತಹ ಅಸಭ್ಯ ವರ್ತನೆಯನ್ನು ಸಹಿಸುವುದಿಲ್ಲ ಎಂದು ವ್ಯಕ್ತಿಯೊಬ್ಬ ಹೇಳುತ್ತಿರುವುದು ವಿಡಿಯೋದಲ್ಲಿದೆ.
ಪತಿಯನ್ನು ರಕ್ಷಿಸಲು ಪತ್ನಿ ಪ್ರಯತ್ನಿಸಿದರೂ ಕೂಡಾ ಜನರ ಗುಂಪು ಆತನನ್ನು ಎಳೆದೊಯ್ದು ಹಲ್ಲೆ ನಡೆಸಿದೆ. ಸರಯೂ ನದಿಯಲ್ಲಿದ್ದ ಪತಿ, ಪತ್ನಿಯನ್ನು ಜನರ ಗುಂಪು ಬಲವಂತದಿಂದ ಹೊರಗೆಳೆದು ಹಾಕಿರುವುದಾಗಿ ವರದಿ ವಿವರಿಸಿದೆ.
ಘಟನೆ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅಯೋಧ್ಯೆ ಪೊಲೀಸರು ತಿಳಿಸಿದ್ದಾರೆ. ಸರಯೂ ಗಂಗೆಯ ಏಳು ಉಪನದಿಗಳಲ್ಲಿ ಒಂದಾಗಿದ್ದು, ಹಿಂದೂಗಳು ಇದನ್ನು ಪವಿತ್ರ ಅದೃಶ್ಯ ನದಿ ಎಂದು ಪರಿಗಣಿಸುತ್ತಾರೆ.