dtvkannada

ಮಂಗಳೂರು: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆ ಸಂಧಿಸುವ ಸುಳ್ಯ ತಾಲೂಕಿನ ಗಡಿ ಭಾಗದಲ್ಲಿ ವಾರದ ಅವಧಿಯಲ್ಲಿ ಮೂರು ಬಾರಿ ಸಂಭವಿಸಿದ ಲಘು ಭೂಕಂಪನಗಳು ಕರಾವಳಿಯಲ್ಲಿ ಭೀತಿಗೆ ಕಾರಣವಾಗಿದೆ.

ಭೂಕಂಪ ತಜ್ಞರ ಪ್ರಕಾರ ನಿರಂತರವಾಗಿ ಸೆಸ್ಮಿಕ್‌ (ಭೂಕಂಪನ) ಚಟುವಟಿಕೆ ಗಳು ಹೆಚ್ಚುತ್ತಿರುವುದು ಇದಕ್ಕೆ ಕಾರಣ. ಸುರತ್ಕಲ್‌ ಎನ್‌ಐಟಿಕೆಯಲ್ಲಿ ಈ ಬಗ್ಗೆ ನಡೆಸಿದ ಅಧ್ಯಯನದ ಪ್ರಕಾರ 200 ವರ್ಷಗಳಲ್ಲಿ ಸುಮಾರು 150 ಬಾರಿ 2ರಿಂದ 4 ತೀವ್ರತೆಯ ಕಂಪನ ಉಂಟಾಗಿವೆ.

ಭವಿಷ್ಯದಲ್ಲಿ ಈ ತೀವ್ರತೆ ನಿಧಾನಕ್ಕೆ ಏರುತ್ತ ಹೋಗಿ ರಿಕ್ಟರ್‌ ಮಾಪಕದಲ್ಲಿ 3ರಿಂದ 5ರ ವರೆಗೂ ತಲುಪಬಹುದು. ಆದರೆ 5ರ ಮೇಲೆ ಸಾಧ್ಯತೆ ಕಡಿಮೆ. ಈ ಪ್ರದೇಶದಲ್ಲಿ ಭೂಕಂಪನ ನಿರೋಧಕ ಕಟ್ಟಡಗಳ ನಿರ್ಮಾಣಕ್ಕೆ ನೀಡಿರುವ ಇಂಡಿಯನ್‌ ಸ್ಟಾಂಡರ್ಡ್‌ ಕೋಡ್‌ ಕೂಡ ಬದಲಾವಣೆ ಆಗಬೇಕು. ಈ ಬಗ್ಗೆ ಅಧ್ಯಯನ ಮಾಡಿ 2019ರಲ್ಲಿ ಶಿಫಾರಸು ಮಾಡಲಾಗಿದೆ ಎನ್ನುತ್ತಾರೆ ಭೂಕಂಪನ ಎಂಜಿನಿಯರ್‌ ಶ್ರೇಯಸ್ವಿ ಚಂದ್ರಶೇಖರ್‌. ಸದ್ಯ ಮಂಗಳೂರು ನಗರ ಝೋನ್‌-3ರಲ್ಲಿ ಬರುವ ಕಾರಣ ಐಎಸ್‌18930:2016 ಕಟ್ಟಡ ಮಾನದಂಡವನ್ನು ರೂಪಿಸಲಾಗಿದೆ. ಝೋನ್‌ 3 ಅಂದರೆ ಮಧ್ಯಮ ತೀವ್ರತೆಯ ಭೂಕಂಪನ ಪ್ರದೇಶ.

ಅಧ್ಯಯನದ ಪ್ರಕಾರ ಭೂಗರ್ಭದಲ್ಲಿರುವ ಯುರೇಶಿಯನ್‌ ಪ್ಲೇಟ್‌ ಮತ್ತು ಇಂಡಿಯನ್‌ ಟೆಕ್ಟೋನಿಕ್‌ ಪ್ಲೇಟ್‌ಗಳ ತಿಕ್ಕಾಟದಿಂದ ಇದು ನಡೆಯುತ್ತಿದೆ. ಭೂಗರ್ಭದಲ್ಲಿರುವ ಸ್ತರಭಂಗ (ಫಾಲ್ಟ್)ಗಳ ಕುಸಿತದಿಂ ದಲೂ ಕಂಪನ ಉಂಟಾಗುತ್ತದೆ.

ಜೂ. 25ರಂದು ಸುಳ್ಯ ಭಾಗದಲ್ಲಿ ಕಂಪನದ ತೀವ್ರತೆ 2.75ರಷ್ಟಿದ್ದರೆ ಜೂ. 28ರದ್ದು ಸುಮಾರು 3.0ರಷ್ಟಿತ್ತು. ಭಾರತದಲ್ಲಿ ಭೂಕಂಪನದ ನಕ್ಷೆಯ ಪ್ರಕಾರ ಕರಾವಳಿ ಭಾಗವನ್ನು ಸೆಸ್ಮಿಕ್‌ ಝೋನ್‌-3ರಲ್ಲಿ ಗುರುತಿಸಲಾಗಿದೆ.
ಇದರ ಪ್ರಕಾರ ರಿಕ್ಟರ್‌ ಮಾಪನದಲ್ಲಿ 2ರಿಂದ 4ರ ತೀವ್ರತೆಯ ಕಂಪನಉಂಟಾಗಬಹುದು. ಬಹುತೇಕ ಸಂದರ್ಭ ಇದು ಗಮನಕ್ಕೆ ಬರದಿರುವ ಸಾಧ್ಯತೆ ಹೆಚ್ಚು. ಜನನಿಬಿಡ ಪ್ರದೇಶಗಳಲ್ಲಿ ಉಂಟಾದಾಗ ಅನುಭವಕ್ಕೆ ಬರುವುದು ಜಾಸ್ತಿ.ಕರಾವಳಿ ಮತ್ತು ಪಶ್ಚಿಮ ಘಟ್ಟದ ಲ್ಲಿರುವ ಸ್ತರಭಂಗಗಳಿಂದಾಗಿ ಸಣ್ಣ, ಮಧ್ಯಮ ಕಂಪನ ಉಂಟಾಗುತ್ತವೆ. ಬಹುತೇಕ ಕಂಪನಗಳಿಗೆ ಸಮುದ್ರ ತಳ ವಿಸ್ತರಣೆ ಕೂಡ ಕಾರಣ ಎನ್ನುತ್ತಾರೆ ಶ್ರೇಯಸ್ವಿ.

By dtv

Leave a Reply

Your email address will not be published. Required fields are marked *

error: Content is protected !!