ಮೂಡುಬಿದಿರೆ: ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಪ್ರದೇಶಕ್ಕೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿ, ಐದು ದನಗಳನ್ನು ರಕ್ಷಿಸಿದ ಘಟನೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಡೇಲು ಗುಡ್ಡಗಾಡು ಪ್ರದೇಶದಲ್ಲಿ ನಡೆದಿದೆ.
ಹಂಡೇಲು ನಿವಾಸಿ ಹಸನ್‌ಬಾವ ತನ್ನ ಕುಟುಂಬಸ್ಥರ ಜೊತೆ ಕಸಾಯಿಖಾನೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ನಿರಂಜನ್ ಕುಮಾರ್, ಉಪನಿರೀಕ್ಷಕರರಾದ ಸುದೀಪ್, ಸಿದ್ದಪ್ಪ, ದಿವಾಕರ್ ರೈ ಸಹಿತ ಸಿಬ್ಬಂದಿಗಳ ತಂಡ ದಾಳಿ ನಡೆಸಿದ್ದು, ಐದು ದನಗಳು, ದನದ ಚರ್ಮ, ಅವುಗಳ ವಧೆಗೆ ಬಳಸುತ್ತಿದ್ದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ನಿರ್ಜನ ಹಾಗೂ ಅಕ್ರಮವಾಗಿ ಕಸಾಯಿಖಾನೆ ನಡೆಸಲು ಪೂರಕ ಪ್ರದೇಶವನ್ನು ಆರೋಪಿ ನಿರ್ಮಿಸಿದ್ದು, ಗುಡ್ಡದ ಬಳಿ ಇದ್ದ ತನ್ನ ಮನೆಯಿಂದಲೇ ನೀರು ಹಾಗೂ ವಿದ್ಯುತ್ ಸಂಪರ್ಕ ಮಾಡಿದ್ದ ಎನ್ನುವ ಅಂಶವು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಅರೋಪಿ ಹಸನ್ ಬಾವ ವಿರುದ್ಧ 2021ರಲ್ಲಿ ಅಕ್ರಮವಾಗಿ ದನದ ಮಾಂಸ ಇರಿಸಿದ ಪ್ರಕರಣ ದಾಖಲಾಗಿತ್ತು.