ಫಿರೋಜಾಬಾದ್: ಪತಿಯ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ 8 ತಿಂಗಳ ತುಂಬು ಗರ್ಭಿಣಿ ಮೇಲೆ ಟ್ರಕ್ ಹರಿದ ಭಯಾನಕ ಘಟನೆ ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ, ಈ ಮಧ್ಯೆ ರಸ್ತೆ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ್ದು ನಂತರ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಕಳೆದ ಬುಧವಾರ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿ ಬೈಕ್‌ನಲ್ಲಿ ತೆರಳುತ್ತಿದ್ದರು.ಈ ವೇಳೆ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ಹೋದಾಗ ಹಿಂದೆ ಕುಳಿತಿದ್ದ ಪತ್ನಿ ಆಯತಪ್ಪಿ ರಸ್ತೆಗೆ ಬಿದ್ದಿದ್ದಾಳೆ.
ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಟ್ರಕ್ ಆಕೆಯ ಮೇಲೆ ಹರಿದಿದೆ.ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆಗೆ ನಡುರಸ್ತೆಯಲ್ಲಿ ಹೆರಿಗೆ ನೋವು ಬಂದು ಅಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
ಮಗು ಜನಿಸಿದ ಕೆಲವೇ ಹೊತ್ತಿನಲ್ಲಿ ಮಹಿಳೆ ಮೃತಪಟ್ಟಿದ್ದಾರೆ.ಸದ್ಯ ಮಹಿಳೆಯ ಪತಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.
ಮಗುವಿನ ಆರೋಗ್ಯದ ಬಗ್ಗೆ ಅನೇಕ ಪರೀಕ್ಷೆಗಳನ್ನು ನಡೆಸಿದ್ದೇವೆ ಆಕೆ ಸಂಪೂರ್ಣ ಆರೋಗ್ಯದಿಂದ ಇದ್ದಾಳೆ ಎಂದು ಹೆಣ್ಣು ಮಗುವನ್ನು ದಾಖಲು ಮಾಡಿರುವ ವೈದ್ಯಕೀಯ ಕಾಲೇಜಿನ ಪ್ರಿನ್ಸಿಪಾಲ್ ಡಾ.ಸಂಗೀತಾ ಅನೇಜಾ ತಿಳಿಸಿದ್ದಾರೆ ಘಟನೆಯಲ್ಲಿ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಆತನ ವಿರುದ್ಧ ಪ್ರಕರಣ ದಾಖಲಾಗಿದೆ ಘಟನೆ ಬಗ್ಗೆ ಸಿಸಿಟಿವಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.