ಮಂಗಳೂರು: ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಬಜಾಲ್ ಗ್ರಾಮದ ದೋಟ ಹೌಸ್ನ ಅಶ್ವಿನ್ ಅವರ ಕೊಟ್ಟಿಗೆಯಿಂದ ದನ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಗುರುನಗರ ಬಂಗ್ಲಗುಡ್ಡೆಯ ಮಹಮ್ಮದ್ ಅಷ್ಪಕ್ ಆಲಿಯಾಸ್ ಶಮೀರ್ (22), ಅಡ್ಡೂರಿನ ಅಜರುದ್ದೀನ್ ಆಲಿಯಾಸ್ ಅಜರ್ (31), ಬಜಾಲ್ ಪಡುವಿನ ಸುಹೈಲ್ (19), ಬಜಾಲ್ ಪಕ್ಕಲಡ್ಕದ ಮೊಹಮ್ಮದ್ ಅಫ್ರೀದ್ (25) ಮತ್ತು ಬಜಾಲ್ ಕಟ್ಟಪುಣಿಯ ಶಾಹೀದ್ ಆಲಿಯಾಸ್ ಚಾಯಿ (19) ಬಂಧಿತರು. ಅಜರುದ್ದೀನ್ ವಿರುದ್ಧ ಬಜಪೆ ಠಾಣೆಯಲ್ಲಿ, ಮೊಹಮ್ಮದ್ ಅಫ್ರೀದ್ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರುತಿ ಕಾರು, ಕತ್ತಿ ಮತ್ತು ಹಗ್ಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಶ್ವಿನ್ ಜು. 20ರಂದು ಸಂಜೆ 6 ಗಂಟೆಗೆ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಮರುದಿನ ಮುಂಜಾನೆ ಸುಮಾರು 3.30ಕ್ಕೆ ದನ ಕೂಗಿದ ಸದ್ದು ಕೇಳಿ ಮನೆಯವರು ನೋಡಿದಾಗ ಕೊಟ್ಟಿಗೆಯಲ್ಲಿದ್ದ ಸುಮಾರು 40,000 ರೂ. ಮೌಲ್ಯದ ಹಸು ಕಾಣೆಯಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.