ಮಂಗಳೂರು: ಮಹಾನಗರ ಪಾಲಿಕೆಯ ಚುನಾವಣೆ ಸೆಪ್ಟೆಂಬರ್ 9 ರಂದು ಮಧ್ಯಾಹ್ನ 12 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ 23 ನೇ ಮೇಯರ್, ಉಪಮೇಯರ್ ಮತ್ತು 4 ಸ್ಥಾಯೀ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ಪ್ರಕ್ರಿಯೆಯು ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಸಭಾಂಗಣದಲ್ಲಿ ನಡೆಯಲಿದೆ.
ಕಳೆದ ಮಾರ್ಚ್ 2 ರಂದು ನಿಗದಿಯಾಗಿದ್ದ ಮೇಯರ್, ಉಪಮೇಯರ್ ಚುನಾವಣೆಯನ್ನು ಕಾನೂನಾತ್ಮಕ ಕಾರಣಗಳಿಂದ ನಡೆಸಲು ಸಾಧ್ಯವಾಗಿರಲಿಲ್ಲ.
ಹಾಗಾಗಿ ಒಂದು ವರ್ಷದ ಮೇಯರ್ ಅವಧಿ ಪೂರ್ಣಗೊಳಿಸಿದ್ದ ಪ್ರೇಮಾನಂದ ಶೆಟ್ಟಿ ಮತ್ತು ಉಪಮೇಯರ್ ಸುಮಂಗಲಾ ರಾವ್ ಅವರೇ ಈ ಹುದ್ದೆಗಳಲ್ಲಿ ಮುಂದುವರಿಸಿದ್ದರು.
ಸುಮಾರು 6 ತಿಂಗಳ ಕಾಲ ಹೆಚ್ಚುವರಿ ಅಧಿಕಾರಾವಧಿ ಅವರಿಬ್ಬರಿಗೆ ಲಭಿಸಿತ್ತು. ಈ ಮೇಯರ್ ಅಧಿಕಾರವು ಅವಧಿ ಮೀರಿ ಮುಂದುವರಿದ ಕಾರಣ ಈಗಿರುವ ಬಿಜೆಪಿ ಆಡಳಿತದ ಕೊನೆಯ ಮೇಯರ್ ಅಧಿಕಾರಾವಧಿ ಸುಮಾರು 6 ತಿಂಗಳು ಕಡಿತವಾಗಲಿದೆ.
ಪಾಲಿಕೆಯ ಒಟ್ಟು 60 ಸ್ಥಾನಗಳ ಪೈಕಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್‌ಡಿಪಿಐ 2 ಸ್ಥಾನಗಳನ್ನು ಹೊಂದಿದೆ. 23 ನೇ ಅವಧಿಯ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ಮಹಿಳೆಗೆ ಮೀಸಲಿರಿಸಲಾಗಿದೆ ಎಂಬುದು ತಿಳಿದು ಬಂದಿದೆ.