ದೆಹಲಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳವು (NIA) ಲುಕ್ಔಟ್ ನೊಟೀಸ್ ಜಾರಿ ಮಾಡಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ನಿರಂತರ ಹುಡುಕಾಟ ನಡೆಯುತ್ತಿದೆ. ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ನಾಲ್ವರು ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿಗಾಗಿ ಒಟ್ಟು ₹ 14 ಲಕ್ಷ ನಗದು ಬಹುಮಾನ ನೀಡುವಾಗಿ ಎನ್ಐಎ ಘೋಷಿಸಿದೆ. ಮೊಹಮ್ಮದ್ ಮುಸ್ತಫಾ ಮತ್ತು ತುಫೈಲ್ ಬಗ್ಗೆ ಮಾಹಿತಿ ನೀಡಿದರೆ ₹ 5 ಲಕ್ಷ, ಇಬ್ಬರು ಆರೋಪಿಗಳಾದ ಉಮರ್ ಫಾರೂಕ್ ಹಾಗೂ ಅಬೂಬಕರ್ ಸಿದ್ದಿಕ್ ಬಗ್ಗೆ ಮಾಹಿತಿ ನೀಡಿದರೆ ₹ 2 ಲಕ್ಷ ನಗದು ಬಹುಮಾನ ನೀಡುವಾಗಿ ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26 ರಂದು ಬೆಳ್ಳಾರೆಯಲ್ಲಿರುವ ಅವರ ಕೋಳಿ ಅಂಗಡಿ ಬಳಿಯೇ ಹಂತಕರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಇದು ಇಡೀ ರಾಜ್ಯಾದ್ಯಂತ ಕಾರ್ಯಕರ್ತರಲ್ಲಿ ಕಿಚ್ಚು ಹೊತ್ತಿಸಿತ್ತು. ಸ್ಥಳಕ್ಕೆ ಬಂದಿದ್ದ ಸಚಿವ ವಿ.ಸುನಿಲ್ ಕುಮಾರ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರು ತಡೆದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರವೀಣ್ ನೆಟ್ಟಾರು ಪತ್ನಿಗೆ ನೌಕರಿ
ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಎಂ. ಅವರಿಗೆ ಗುತ್ತಿಗೆ ಆಧಾರಿತ ಹಿರಿಯ ಸಹಾಯಕ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಜನಸ್ಪಂದನ ಸಮಾವೇಶದಲ್ಲಿ ನೇಮಕಾತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಅದರಂತೆ ಸಿ ಗ್ರೂಪ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶ ಹೊರಡಿಸಿತ್ತು.
ಸುಳ್ಯ ತಾಲೂಕಿನ ಬಳ್ಳಾರೆ ಗ್ರಾಮದ ಬೂಡು ಮನೆಯ ಮೊಹಮ್ಮದ್ ಮುಸ್ತಫ ಅಲಿಯಾಸ್ ಮುಸ್ತಫ ಪೈಜಾರು (ಪತ್ತೆಗೆ 5 ಲಕ್ಷ ರೂ.), ಕೊಡುಗು ಜಿಲ್ಲೆ ಮಡಿಕೇರಿ ನಗರದ ಗದ್ದಿಗೆ ಮಸೀದಿ ಹಿಂಭಾಗ ನಿವಾಸಿ ಎಂ.ಎಚ್.ತುಫೈಲ್ (5 ಲಕ್ಷ ರೂ.), ಸುಳ್ಯ ನಗರದ ಕಲ್ಲುಮುಟ್ಲು ಮನೆ ಎಂ.ಆರ್. ಉಮ್ಮರ್ ಫಾರೂಕ್ (2 ಲಕ್ಷ ರೂ.) ಮತ್ತು ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ಅಲಿಯಾಸ್ ಪೈಂಟರ್ ಸಿದ್ದಿಕ್ ಅಲಿಯಾಸ್ ಗುಜರಿ ಸಿದ್ದಿಕ್(2 ಲಕ್ಷ ರೂ.) ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ.