ಪುತ್ತೂರು: ಶಾಸಕರಾದ ಸಂಜೀವ ಮಠಂದೂರು ತಾವು ಮಾಡದ ಕೆಲಸವನ್ನು ತಮ್ಮದೆಂದು ಬಿಂಬಿಸಿ ಬಿಲ್ಡಪ್ ಕೊಡುತ್ತಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪತ್ರಿಕಾಗೋಷ್ಠಿಯಲ್ಲಿ ಗಂಭೀರವಾಗಿ ಆರೋಪಿಸಿದೆ.

ಈ ಕುರಿತು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿಯವರು ಮಾತನಾಡಿ ಶಾಸಕ ಸಂಜೀವ ಮಠಂದೂರು ಶಾಸಕರಾಗಿ ನಾಲ್ಕೂವರೆ ವರ್ಷಗಳು ಕಳೆದಿದ್ದು, ಪುತ್ತೂರಿನ ಜನತೆಗಾಗಿ ಏನನ್ನೂ ಮಾಡಿಲ್ಲ ಎಂದು ನೇರವಾಗಿ ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ತಮ್ಮದೆಂಬಂತೆ ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಪುತ್ತೂರು- ಉಪ್ಪಿನಂಗಡಿಯ ಅಭಿವೃದ್ಧಿ ಕಾಮಗಾರಿಗೆ ಹಣ ಬಿಡುಗಡೆ ಮಾಡಿರುವುದು ಹಿಂದಿನ ಕಾಂಗ್ರೆಸ್ ಶಾಸಕರಾದ ಶಕುಂತಲಾ ಶೆಟ್ಟಿಯಾಗಿದ್ದು, ಇದೀಗ ಶಾಸಕರು ಈ ಕಾಮಗಾರಿ ತನ್ನ ಪ್ರಯತ್ನದಿಂದ ಆಗಿರುವುದು ಎಂದು ಫೋಸ್ ಕೊಡುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾಡುವ ಸೇತುವೆ ನಿರ್ಮಾಣದಂತಹ ರೂಟೀನ್ ಕೆಲಸಗಳನ್ನೂ ತಮ್ಮಿಂದಲೇ ಆಗುತ್ತಿದೆ ಎಂದು ಶಾಸಕರು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಂದು ಹೇಳುತ್ತಾ ತಿರುಗಾಟುತ್ತಿದ್ದು, ಪುತ್ತೂರು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಆರಂಭಿಸಿದ ಕೆಲಸವನ್ನು ಉದ್ಘಾಟಿಸುವ ಕೆಲಸವನ್ನಷ್ಟೇ ಶಾಸಕರು ಮಾಡುತ್ತಿದ್ದಾರೆ.
ತಾಲೂಕಿಗೆ ಒಂದು ಮೆಡಿಕಲ್ ಕಾಲೇಜು ತರುವಲ್ಲಿಯೂ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ. ಸೀ ಫುಡ್ ಪಾರ್ಕ್ ಆರಂಭಿಸುವುದಾಗಿ ಹೇಳಿದ್ದ ಶಾಸಕರು ಇದೀಗ ಈ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ ಎಂದು ಆಕ್ರೋಶಗೊಂಡರು.