ಮಂಗಳೂರು: ಖಾಸಗಿ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮದ ಬಳಿಕ ನಾಲ್ವರು ವಿದ್ಯಾರ್ಥಿಗಳು ಬುರ್ಖಾ ಮತ್ತು ಹಿಜಾಬ್ ಧರಿಸಿ ‘ಐಟಂ ಸಾಂಗ್’ಗೆ ನೃತ್ಯ ಮಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆಯೆಂದು ತಿಳಿದು ಬಂದಿದೆ.

ನಗರದ ವಾಮಾಂಜೂರಿನ ಕಾಲೇಜಿನಲ್ಲಿ ಈ ನೃತ್ಯ ಮಾಡಿರುವುದಾಗಿ ವರದಿಯಾಗಿದ್ದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬುರ್ಖಾ ಮತ್ತು ಹಿಜಾಬ್ ಅನ್ನು ಅಣಕಿಸುವಂತೆ ಬಾಲಿವುಡ್‌ನ ‘ಐಟಂ ಸಾಂಗ್’ಗೆ ಹೆಜ್ಜೆಗಳನ್ನು ಹಾಕಿದ್ದಾರೆ.
ಇದರ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ಬಳಿಕ ಎಚ್ಚೆತ್ತ ಕಾಲೇಜಿನ ಆಡಳಿತ ಮಂಡಳಿ, ನೃತ್ಯ ಮಾಡಿದ ನಾಲ್ವರೂ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವುದಾಗಿ ತಿಳಿಸಿದೆ. ಈ ಒಂದು ನೃತ್ಯವನ್ನು ಮಾಡಿದವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ವೀಡಿಯೋ ವೈರಲಾದ ಬಳಿಕ ಸ್ಪಷ್ಟನೆ ನೀಡಿರುವ ಕಾಲೇಜಿನ ಆಡಳಿತ ಮಂಡಳಿ “ಕಾಲೇಜಿನ ವಿಭಾಗವೊಂದರ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯ ಕಾರ್ಯಕ್ರಮವಿತ್ತು.ಈ ನೃತ್ಯವು ಆ ಕಾರ್ಯಕ್ರಮದ ಭಾಗವಾಗಿರಲಿಲ್ಲ. ವೇದಿಕೆಯ ಮೇಲೆ ಬುರ್ಖಾ ಧರಿಸಿ ಹಾಡಿಗೆ ನೃತ್ಯ ಮಾಡಿದವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಾಗಿದ್ದಾರೆ.
ಸಮಾಜದ ಮತ್ತು ಕ್ಯಾಂಪಸ್‌ನ ಸಾಮರಸ್ಯವನ್ನು ಹಾಳುಮಾಡುವ ಯಾವುದೇ ಚಟುವಟಿಕೆಗಳನ್ನು ನಮ್ಮ ಕಾಲೇಜು ಬೆಂಬಲಿಸುವುದಿಲ್ಲ. ಮತ್ತು ಇದನ್ನು ಖಂಡಿಸುತ್ತದೆ. ಈ ನಿಟ್ಟಿನಲ್ಲಿ ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.
ವೀಡಿಯೋದಲ್ಲಿ ಕಂಡು ಬಂದಿರುವ ನಾಲ್ವರು ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ಅಮಾನತುಗೊಳಿಸಲಾಗಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.